ನಟ ಪುನೀತ್‌ಗೆ ಕನ್ನಡನೇ ಬರಲ್ಲ ಎಂದು ಅಪಪ್ರಚಾರ: ಜಗ್ಗೇಶ್‌ ಹೇಳಿದ್ದೇನು?

ಮಠ ಸಿನಿಮಾ ಖ್ಯಾತಿಯ ಗುರುಪ್ರಸಾದ್‌ ಅವರ ಶವ ನಿನ್ನೆ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದನ್ನು ಸದ್ಯ ಆತ್ಮಹತ್ಯೆ ಎಂದು ಶಂಕಿಸಲಾಗಿದ್ದು, ನಿನ್ನೆಯೇ ಅವರ ಅಂತ್ಯಕ್ರಿಯೆ ನಡೆಯಿತು. ಇನ್ನು ಗುರುಪ್ರಸಾದ್‌ ಅವರೊಂದಿಗೆ ಒಡನಾಟ ಹೊಂದಿದ್ದ ಹಿರಿಯ ನಟ ಜಗ್ಗೇಶ್‌ ಅವರು ಮಾಧ್ಯಮಗಳ ಮುಂದೆ ಕೆಲವು ಶಾಕಿಂಗ್‌ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.

ಈ ಹಿಂದೆ ಗುರುಪ್ರಸಾದ್‌ ಅವರು ನಟ ಪುನೀತ್‌ ರಾಜ್‌ಕುಮಾರ್‌ ಅವರ ಬಗ್ಗೆ ಅಪಪ್ರಚಾರ ಮಾಡಿದ್ದರು ಎಂದು ನಟ ಜಗ್ಗೇಶ್‌ ಹೇಳಿಕೊಂಡಿದ್ದಾರೆ. ಗುರುಪ್ರಸಾದ್‌ ಅವರು ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಕನ್ನಡವೇ ಗೊತ್ತಿಲ್ಲ, ನಾನೇ ಅವರಿಗೆ ಕನ್ನಡ ಕಲಿಸಿಕೊಟ್ಟಿದ್ದು ಎಂದು ಗುರು ಹೇಳಿಕೊಂಡಿದ್ದರು.

ನಾನು ಪುನೀತ್‌ ರಾಜ್‌ಕುಮಾರ್‌ ಅವರೊಂದಿಗೆ ತಿರುಪತಿಗೆ ಹೋದಾಗ ಖುದ್ದಾಗಿ ಪುನೀತ್‌ ಅವರೇ ಈ ವಿಚಾರವನ್ನು ನನ್ನ ಬಳಿ ಹೇಳಿಕೊಂಡು ನೊಂದಿದ್ದರು. ಏನಣ್ಣಾ ಅವರು (ಗುರುಪ್ರಸಾದ್)‌ ಹಾಗೇ ಹೇಳಿಕೊಂಡಿದ್ದಾರೆ? ನನಗೆ ಕನ್ನಡನೇ ಗೊತ್ತಿಲ್ಲ ಎಂದು ಎಲ್ಲರ ಬಳಿ ಹೇಳಿದ್ದಾರೆ ಎಂದು ಪುನೀತ್‌ ಬೇಸರ ಮಾಡಿಕೊಂಡಿದ್ದರು ಎಂದು ಜಗ್ಗೇಶ್‌ ಹೇಳಿದ್ದಾರೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಅಲ್ಲದೆ ಜಗ್ಗೇಶ್‌ ಅವರು ಗುರುಪ್ರಸಾದ್‌ ಅವರ ಬಗ್ಗೆ ಹಲವು ಶಾಕಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.‌ ಗುರು ಒಂದು ದಿನ ರಾತ್ರಿ 1.30ಕ್ಕೆ ಫೋನ್​ ಮಾಡಿ, ನನಗೆ ಕೆಟ್ಟದಾಗಿ ಬೈದಿದ್ದರು. ಸತ್‌ ಹೋಗೋ, ಹಾಳಾಗಿ ಹೋಗಬೇಕು ನೀನು, ನೀನೊಬ್ಬ ಹೀರೋನಾ? ಎಂದಿದ್ದ. ಬೆಳಿಗ್ಗೆ ಬಂದು ಅಣ್ಣ ತಪ್ಪಾಯ್ತು ಎಂದು ಕೈಮುಗಿದಿದ್ದ ಎಂದು ಜಗ್ಗೇಶ್‌ ಹೇಳಿದ್ದಾರೆ.

ಗುರು ಸಿನಿಮಾಗಳನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದ. ಅವರೊಂದಿಗಿನ ಒಡನಾಟದಲ್ಲಿ ವೇಳೆ ಅವರು ಎಡಪಂಥೀಯ ವಿಚಾರಗಳನ್ನು ಹೊಂದಿದ್ದು, ಬಿಜೆಪಿ ವಿರೋಧಿಯಾಗಿದ್ದರು ಎಂಬುದು ಗೊತ್ತಾಯಿತು ಎಂದು ಜಗ್ಗೇಶ್ ಆರೋಪಿಸಿದ್ದಾರೆ.

ಗುರುಪ್ರಸಾದ್ ಅವರಿಗೆ ಮೈಯೆಲ್ಲ ಕಡಿತ ಬರುವ ವಿಚಿತ್ರ ಕಾಯಿಲೆ ಇತ್ತು. ಅವರೊಂದಿಗೆ ಕುಳಿತಾಗ ಮೈಯೆಲ್ಲ ಕೆರೆದುಕೊಳ್ಳುತ್ತಿದ್ದರು. ಮೈಯೆಲ್ಲ ರಕ್ತ, ಕೀವು ಬರುತ್ತಿತ್ತು. ಆ ಸ್ಥಿತಿಯಲ್ಲೇ ಅವರು ಆಗಾಗ ನನ್ನ ತಟ್ಟೆಗೂ ಕೈಹಾಕಿಬಿಡುತ್ತಿದ್ದರು. ಇದರಿಂದ ನಾವು ಗುರು ಅವರಿಂದ ದೂರ ಕುಳಿತು ಊಟ ಮಾಡುತ್ತಿದ್ದೆವು. ಆ ಕಾಯಿಲೆಗೆ ಟ್ರೀಟ್‌ಮೆಂಟ್‌ ತಗೋ ಅಂದ್ರು ಯಾರ ಮಾತನ್ನೂ ಗುರು ಕೇಳುತ್ತಿರಲಿಲ್ಲ. ಜೊತೆಗೆ ಮೈತುಂಬಾ ಸಾಲ ಮಾಡಿಕೊಂಡು ಮಾನಸಿಕವಾಗಿ ಕುಗ್ಗಿದ್ದರು ಎಂದೂ ಜಗ್ಗೇಶ್‌ ಮಾತನಾಡಿದ್ದಾರೆ.

ಅಲ್ಲದೆ, ಗುರುಪ್ರಸಾದ್‌ ಎರಡು ಒಳ್ಳೆಯ ಕೃತಿಗಳನ್ನ ಕೊಟ್ಟು ಹೋಗಿದ್ದಾನೆ. ಅವನ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಶವದ ಫೋಟೋ ನೋಡಿ ತುಂಬ ನೋವಾಯ್ತು. ಶವದ ಕೆಳಗೆ ರಕ್ತಸ್ರಾವ ಆಗಿದೆ, ಅದೇಬೋ ನನಗೂ ಅರ್ಥವಾಗಲಿಲ್ಲ, ಒಂದು ರೀತಿ ವಿಚಿತ್ರವಾಗಿದೆ. ಗುರುಪ್ರಸಾದ್ ಜೊತೆಗೆ ಇಷ್ಟು ವರ್ಷ ಒಡನಾಟ ಇದ್ದಿದ್ದಕ್ಕೆ ಅವರ ಮಗುವಿಗೆ ಸಹಾಯ ಮಾಡುತ್ತೇನೆ. ಅದೇನೆಂದು ಹೇಳಲ್ಲ ಎಂದು ಜಗ್ಗೇಶ್ ಹೇಳಿಕೊಂಡಿದ್ದಾರೆ.

ಬಿಸಿ ಬಿಸಿ ಸುದ್ದಿ

ಕ್ರಿಕೆಟ್ ಲೈವ್ ಸ್ಕೋರ್

ಚಿನ್ನ ಮತ್ತು ಬೆಳ್ಳಿ ಬೆಲೆಗಳು