ಬಿಎಸ್‌ವೈಗೆ ಕೋವಿಡ್ ಉರುಳು

ಬೆಂಗಳೂರು, ನ. ೯- ಕೋವಿಡ್ ಸಂದರ್ಭದಲ್ಲಿ ನಡೆದಿರುವ ಅಕ್ರಮ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಅಂದಿನ ಆರೋಗ್ಯ ಸಚಿವ ಬಿ. ಶ್ರೀರಾಮುಲು ವಿರುದ್ಧ ವಿರುದ್ಧ ಕ್ರಮಕೈಗೊಳ್ಳಲಿ ಪ್ರಾಸಿಕ್ಯೂಷನ್ ಗೆ ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಕುನ್ಹಾ ಆಯೋಗ ಶಿಫಾರಸ್ಸು ಮಾಡಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ನ್ಯಾಯಮೂರ್ತಿಗಳು ಪ್ರಾಮಾಣಿಕವಾಗಿ ವರದಿ ನೀಡಿದ್ದಾರೆ. ಈ ವರದಿಯ ಹಿಂದೆ ಯಾವುದೇ ರಾಜಕೀಯ ದುರುದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರಿನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯ ನಿವೃತ್ತ ನ್ಯಾಯಮೂರ್ತಿ ಕುನ್ಹಾ ಆಯೋಗವನ್ನು ರಚನೆ ಮಾಡಲಾಗಿತ್ತು. ಅವರು ತನಿಖೆ ನಡೆಸಿ ಸಾವಿರ ಪುಟಗಳ ವರದಿ ಸಲ್ಲಿಸಿತ್ತು. ಆಯೋಗವು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಸಚಿವ ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್ ಗೆ ಶಿಫಾರಸ್ ಮಾಡಿದ್ದು ಸಂಪುಟ ಉಪಸಮಿತಿ ಪರಿಶೀಲನೆ ಮಾಡುತ್ತಿದೆ ಎಂದು ಹೇಳಿದರು.
ಕೋವಿಡ್ ಹಗರಣ ಕುರಿತಂತೆ ವೈಯಕ್ತಿಕ ವಿಚಾರವಿಲ್ಲ. ಕಾಂಗ್ರೆಸ್ ವಿರೋಧ ಪಕ್ಷದಲ್ಲಿದ್ದಾಗ ಈ ಬಗ್ಗೆ ಆರೋಪ ಮಾಡಿದ್ದೆವು. ಕಾಂಗ್ರೆಸ್ ನಿಂದಲೂ ತನಿಖೆ ನಡೆಸಿದ್ದೆವು ವರದಿ ಸರ್ಕಾರಕ್ಕೆ ನೀಡಿತ್ತು. ಆದರೆ ನಿಯಮ ಬದಿಗೊತ್ತಿ ನಿರ್ಧಾರ ಕೈಗೊಂಡಿದ್ದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಿವೃತ್ತ ನ್ಯಾಯಮೂರ್ತಿ ಕುನ್ಹಾ ನೇತೃತ್ವದ ಆಯೋಗಕ್ಕೆ ತನಿಖೆಗೆ ಕೊಟ್ಟಿದ್ದೆವು. ಈಗ ಮೊದಲ ವರದಿ ಕೊಟ್ಟಿದ್ದಾರೆ. ಅಂತಿಮ ವರದಿಯನ್ನುನೀಡುತ್ತಾರೆ ಎಂದು ಸ್ಪಷ್ಟಪಡಿಸಿದರು.
ಕೋವಿಡ್ ಅಕ್ರಮದ ಬಗ್ಗೆ ನ್ಯಾಯಮೂರ್ತಿ ಮೈಕಲ್ ಡಿ. ಕುನ್ಹಾ ಅವರು ನೀಡಿರುವ ವರದಿಯನ್ನು ಸರ್ಕಾರ ಬಹಿರಂಗ ಮಾಡಿಲ್ಲ. ಆದರೂ ಮಾಧ್ಯಮಗಳಿಗೆ ಮಾಹಿತಿ ಸೋರಿಕೆಯಾಗಿದೆ. ಕುನ್ಹಾ ಅವರು ಯಡಿಯೂರಪ್ಪ ಹಾಗೂಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್‌ಗೆ ಶಿಫಾರಸ್ಸು ಮಾಡಿರುವ ಬಗ್ಗೆ ಮಾಧ್ಯಮ ವರದಿ ನಾನು ನೋಡಿದ್ದೇನೆ. ಇದರ ಹಿಂದೆ ರಾಜಕೀಯ ದುರುದ್ದೇಶ ಇದೆ ಎಂಬ ಬಿಜೆಪಿ ನಾಯಕರ ಹೇಳಿಕೆಯನ್ನು ಗಮನಿಸಿದ್ದೇವೆ. ಕೋವಿಡ್ ಅಕ್ರಮದ ತನಿಖೆ ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದರು.
ಕೋವಿಡ್ ಸಂದರ್ಭದಲ್ಲಿ ಅಕ್ರಮ ನಡೆದಿರುವ ಬಗ್ಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ವರದಿ ನೀಡಿತ್ತು. ಅದರಂತೆ ನ್ಯಾಯಮೂರ್ತಿ ಕುನ್ಹಾ ಅವರ ಆಯೋಗವನ್ನು ರಚನೆ ಮಾಡಲಾಗಿತ್ತು. ಆಯೋಗದವರು ೧,೫೦೦ ಪುಟಗಳ ವರದಿ ನೀಡಿದ್ದಾರೆ. ವರದಿ ಸರ್ಕಾರದ ಪರಿಶೀಲನೆ ಹಂತದಲ್ಲಿದೆ ಎಂದರು.
ಕೋವಿಡ್ ಅಕ್ರಮದ ತನಿಖೆ ರಾಜಕೀಯ ದುರುದ್ದೇಶ ಎಂದು ಹೇಳಿರುವ ಯಡಿಯೂರಪ್ಪ ಅವರು ಆತ್ಮಾವಲೋಕನ ಮಾಡಿಕೊಳ್ಳಲಿ ಕೋವಿಡ್‌ನಂತಹ ಕಷ್ಟಕರ ಸಂದರ್ಭದಲ್ಲಿ ಹಣ ಲೂಟಿ ಮಾಡಿರುವುದು ಸರಿಯೇ ಎಂದು ದಿನೇಶ್‌ಗುಂಡೂರಾವ್ ಪ್ರಶ್ನಿಸಿದರು.

ಕೋವಿಡ್ ಸಂದರ್ಭದಲ್ಲಿ ಪಿಪಿಇ ಕಿಟ್ ಸೇರಿದಂತೆ ಹಲವು ಸಾಮಗ್ರಿಗಳನ್ನು ಹೆಚ್ಚಿನ ಬೆಲೆಗೆ ಖರೀದಿಸಲಾಗಿದೆ ಎಂಬ ಬಗ್ಗೆಯೂ ಮಾಹಿತಿ ಇದೆ. ಮುಂದೆ ಹೇಳುತ್ತೇವೆ ನ್ಯಾಯಮೂರ್ತಿ ಕುನ್ಹಾ ಅವರ ವರದಿಯಾಧಾರದ ಮೇಲೆ ತನಿಖೆಗಾಗಿ ವಿಶೇಷ ತಂಡವನ್ನು ರಚನೆ ಮಾಡಬೇಕಿದೆ. ಎಲ್ಲವನ್ನೂ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇವೆ ಎಂದರು.ನ್ಯಾಯಮೂರ್ತಿ ಕುನ್ಹಾ ಅವರ ನೇತೃತ್ವದ ಆಯೋಗ ಸರ್ಕಾರಕ್ಕೆ ಆಗಿರುವ ನಷ್ಟವನ್ನು ತಪ್ಪಿತಸ್ಥರಿಂದ ವಸೂಲಿ ಮಾಡುವಂತೆಯೂ ಆಯೋಗ ವರದಿಯಲ್ಲಿ ಹೇಳಿದೆ. ಆಯೋಗದ ವರದಿಯನ್ನು ಆಧಾರವಾಗಿಟ್ಟುಕೊಂಡು ಮುಂದೆ ತನಿಖೆ ನಡೆಸುತ್ತೇವೆ ವರದಿಯನ್ನು ಹಗುರವಾಗಿ ಪರಿಗಣಿಸುವ ಅಗತ್ಯವಿಲ್ಲ ಯಡಿಯೂರಪ್ಪ ಅವರು ಕಾನೂನಾತ್ಮಕ ಹೋರಾಟ ಮಾಡಲಿ ಆದರೆ ಏಕಾಏಕಿ ರಾಜಕೀಯ ದುರುದ್ದೇಶ ಎಂದು ಹೇಳಿರುವುದು ಸರಿಯಲ್ಲ ಎಂದರು.

ನಾನು ತಪ್ಪು ಮಾಡಿಲ್ಲ:ಬಿಎಸ್‌ವೈಕೋವಿಡ್ ಸಂದರ್ಭದಲ್ಲಿ ಕಾನೂನು ಚೌಕಟ್ಟಿನಲ್ಲೇ ಎಲ್ಲವನ್ನೂ ಮಾಡಿದ್ದೇವೆ. ಯಾವುದೇ ತಪ್ಪು ಆಗಿಲ್ಲ. ದುರುದ್ದೇಶದಿಂದ ಹಳೆಯದನ್ನು ಕೆದಕುವ ಪ್ರಯತ್ನವನ್ನು ಕಾಂಗ್ರೆಸ್ ನಡೆಸಿದೆ. ಇದರಿಂದ ಅವರಿಗೆ ಲಾಭವಾಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.ಕೋವಿಡ್ ಸಂದರ್ಭದಲ್ಲಿ ಅಕ್ರಮ ನಡೆದಿದೆ ಎಂದು ತಮ್ಮ ವಿರುದ್ಧ ತನಿಖೆಗೆ ನ್ಯಾಯಮೂರ್ತಿ ಮೈಕಲ್ ಡಿ. ಕುನ್ಹಾ ಅವರ ನೇತೃತ್ವದ ಆಯೋಗ ಶಿಫಾರಸ್ಸು ಮಾಡಿರುವ ಸಂಬಂಧ ಸಂಡೂರಿನಲ್ಲಿಂದು ಪ್ರತಿಕ್ರಿಯೆ ನೀಡಿದ ಅವರು, ನಾನು ಯಾವುದೇ ತಪ್ಪು ಮಾಡಿಲ್ಲ. ಕೋವಿಡ್ ಸಂದರ್ಭದಲ್ಲಿ ಕಾನೂನು ಪ್ರಕಾರವಾಗಿಯೇ ಎಲ್ಲವೂ ನಡೆದಿದೆ. ಏನೂ ಇಲ್ಲ ಎಂದು ಹಳೆಯದನ್ನು ಕೆದಕುವ ಪ್ರಯತ್ನ ನಡೆದಿದೆ. ಈ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದರು.ನಾನು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದ್ದೇನೆ.ನಾನು ತಪ್ಪು ಮಾಡಿಲ್ಲ. ಯಾವುದೇ ತನಿಖೆಯಾಗಲಿ ತೊಂದರೆ ಇಲ್ಲ. ವಾಸ್ತವ ಏನು ಎಂಬುದು ಎಲ್ಲರಿಗೂ ಗೊತ್ತಿದೆ. ಆಗ ಸಚಿವರಾಗಿದ್ದ ಶ್ರೀರಾಮುವಾಗಲಿ, ನಾನಾಗಲಿ ತಪ್ಪು ಮಾಡಿಲ್ಲ ಎಂದರು.ರಾಜಕೀಯ ದುರುದ್ದೇಶದಿಂದ ಹಳೆಯದನ್ನು ಕೆದಕುವ ಪ್ರಯತ್ನ ನಡೆದಿದೆ. ನನಗೆ ವಿಶ್ವಾಸವಿದೆ. ನಾನು ತಪ್ಪು ಮಾಡಿಲ್ಲ. ತನಿಖೆಯಾಗಲಿ. ವಾಸ್ತವ ಸತ್ಯ ಗೊತ್ತಾಗುತ್ತದೆ. ಹಳೆಯದನ್ನು ಕೆದಕುವುದರಿಂದ ಯಾರಿಗೂ ಪ್ರಯೋಜನ ಆಗಲ್ಲ ಎಂದರು.

ಬಿಸಿ ಬಿಸಿ ಸುದ್ದಿ

ಕ್ರಿಕೆಟ್ ಲೈವ್ ಸ್ಕೋರ್

ಚಿನ್ನ ಮತ್ತು ಬೆಳ್ಳಿ ಬೆಲೆಗಳು