ಬಹುನಿರೀಕ್ಷಿತ ‘ಪುಷ್ಪ 2’ ಸಿನಿಮಾದ ಹೊಸ ಹಾಡು ಬಿಡುಗಡೆ ಆಗಿದೆ. ಚೆನ್ನೈನಲ್ಲಿ ಅದ್ದೂರಿ ಇವೆಂಟ್ ಮಾಡುವ ಮೂಲಕ ಈ ಹಾಡನ್ನು ರಿಲೀಸ್ ಮಾಡಲಾಗಿದೆ. ‘ಕಿಸಿಕ್..’ ಹಾಡಿನಲ್ಲಿ ಕನ್ನಡದ ನಟಿ ಶ್ರೀಲೀಲಾ ಮತ್ತು ಅಲ್ಲು ಅರ್ಜುನ್ ಅವರು ಹೆಜ್ಜೆ ಹಾಕಿದ್ದಾರೆ. ದೇವಿ ಶ್ರೀಪ್ರಸಾದ್ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಈ ಹಾಡು ಟ್ರೆಂಡ್ ಆಗುತ್ತಿದೆ.

ಡಿಸೆಂಬರ್ 5ರಂದು ‘ಪುಷ್ಪ 2’ ಸಿನಿಮಾ ತೆರೆಕಾಣಲಿದೆ. ಈಗಾಗಲೇ ಭರ್ಜರಿಯಾಗಿ ಪ್ರಚಾರ ಮಾಡಲಾಗುತ್ತಿದೆ. ಟ್ರೇಲರ್ ಮೂಲಕ ಈಗಾಗಲೇ ಧೂಳೆಬ್ಬಿಸಲಾಗಿದೆ. ಅಲ್ಲದೇ, ಟೈಟಲ್ ಸಾಂಗ್ ಕೂಡ ಅಬ್ಬರಿಸಿದೆ. ಈಗ ಇನ್ನೊಂದು ಹಾಡು ಬಿಡುಗಡೆ ಆಗಿದೆ. ಈ ಸಾಂಗ್ನಲ್ಲಿ ಶ್ರೀಲೀಲಾ ಅವರು ಅಲ್ಲು ಅರ್ಜುನ್ ಜೊತೆ ಬಿಂದಾಸ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ‘ಕಿಸಿಕ್..’ ಹಾಡಿನ ಅಬ್ಬರ ಜೋರಾಗಿದೆ. ಎಲ್ಲ ಕಡೆಗಳಲ್ಲಿ ಈ ಹಾಡು ಟ್ರೆಂಡ್ ಆಗುತ್ತಿದೆ. ‘ಪುಷ್ಪ 2’ ಚಿತ್ರಕ್ಕೆ ದೇವಿ ಶ್ರೀಪ್ರಸಾದ್ ಅವರು ಸಂಗೀತ ನೀಡಿದ್ದಾರೆ. ಚೈನ್ನೈನಲ್ಲಿ ಅದ್ದೂರಿಯಾಗಿ ಸಾಂಗ್ ರಿಲೀಸ್ ಮಾಡಲಾಗಿದೆ.
ನಿರ್ದೇಶಕ ಸುಕುಮಾರ್ ಅವರು ತಮ್ಮ ಪ್ರತಿ ಸಿನಿಮಾದಲ್ಲಿ ಹಾಡುಗಳಿಗೆ ಹೆಚ್ಚು ಮಹತ್ವ ನೀಡುತ್ತಾರೆ. ‘ಪುಷ್ಪ 2’ ಸಿನಿಮಾದಲ್ಲೂ ಅದು ಮುಂದುವರಿದಿದೆ. ‘ಕಿಸಿಕ್..’ ಹಾಡನ್ನು ಅದ್ದೂರಿಯಾಗಿ ಚಿತ್ರಿಸಲಾಗಿದೆ. ‘ಪುಷ್ಪ’ ಸಿನಿಮಾದಲ್ಲಿ ಸಮಂತಾ ರುತ್ ಪ್ರಭು ಅವರು ಐಟಂ ಡ್ಯಾನ್ಸ್ ಮಾಡಿದ್ದರು. ಈಗ ಸೀಕ್ವೆಲ್ನಲ್ಲಿ ಶ್ರೀಲೀಲಾ ಅವರು ಹೆಜ್ಜೆ ಹಾಕಿದ್ದಾರೆ. ಹಾಡಿಗೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ.
‘ಕಿಸಿಕ್’ ಹಾಡಿಗೆ ಖ್ಯಾತ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಅವರು ಕೊರಿಯೋಗ್ರಫಿ ಮಾಡಿದ್ದಾರೆ. ಝಗಮಗಿಸುವ ಸೆಟ್ನಲ್ಲಿ ಈ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಸದ್ಯಕ್ಕೆ ಬಿಡುಗಡೆ ಆಗಿರುವುದು ಲಿರಿಕಲ್ ವಿಡಿಯೋ ಮಾತ್ರ. ಚಿತ್ರಮಂದಿರದಲ್ಲಿ ಪೂರ್ತಿ ಸಾಂಗ್ ನೋಡಲು ಅಭಿಮಾನಿಗಳು ಕಾದಿದ್ದಾರೆ.
ಅಲ್ಲು ಅರ್ಜುನ್ ಅವರ ವೃತ್ತಿ ಜೀವನದ ಅತಿ ದೊಡ್ಡ ಸಿನಿಮಾ ಇದು. ನೂರಾರು ಕೋಟಿ ರೂಪಾಯಿ ಬಂಡವಾಳ ಹೂಡಿ ‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆಯು ಈ ಸಿನಿಮಾವನ್ನು ನಿರ್ಮಿಸಿದೆ. ಪ್ರಚಾರಕ್ಕಾಗಿಯೂ ದೊಡ್ಡ ಬಜೆಟ್ ಮೀಸಲಿಡಲಾಗಿದೆ. ಡಿಸೆಂಬರ್ 5ರಂದು ದೇಶಾದ್ಯಂತ ‘ಪುಷ್ಪ 2’ ಸಿನಿಮಾ ಅಬ್ಬರಿಸಲಿದೆ. ಬಾಕ್ಸ್ ಆಫೀಸ್ನಲ್ಲಿ ಸುನಾಮಿಯೇ ಏಳುವ ನಿರೀಕ್ಷೆ ಇದೆ.