ಜಾರ್ಖಂಡ್ ಮುಖ್ಯಮಂತ್ರಿಯಾಗಿ ನಾಳೆ (ಗುರುವಾರ) ಹೇಮಂತ್ ಸೊರೇನ್ ಪ್ರಮಾಣವಚನ ಸ್ವೀಕಾರ ಮಾಡುವ ಸಾಧ್ಯತೆಯಿದೆ. ಈ ಸಮಾರಂಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಪಾಲ್ಗೊಳ್ಳುವ ಸಾಧ್ಯತೆ ಇದೆ.

ನವದೆಹಲಿ: ಜಾರ್ಖಂಡ್ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೇನ್ ಗುರುವಾರ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಮಾಣ ವಚನದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಕಾಂಗ್ರೆಸ್ನ ರಾಹುಲ್ ಗಾಂಧಿ ಮತ್ತು ಆರ್ಜೆಡಿಯ ತೇಜಸ್ವಿ ಯಾದವ್ ಸೇರಿದಂತೆ ಇಂಡಿಯಾ ಬಣದ ಹಿರಿಯ ನಾಯಕರು ನವೆಂಬರ್ 28ರಂದು ಹೇಮಂತ್ ಸೊರೇನ್ ನೇತೃತ್ವದ ಸರ್ಕಾರದ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಹೇಮಂತ್ ಸೊರೇನ್ ಹೊಸ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಆಮಂತ್ರಿಸಿದ್ದಾರೆ.
ಹೇಮಂತ್ ಸೊರೇನ್ ಅವರ ಜೆಎಂಎಂ ನೇತೃತ್ವದ ಮೈತ್ರಿ ಶನಿವಾರ ಜಾರ್ಖಂಡ್ನಲ್ಲಿ ಸತತ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಿತು. 81 ಸದಸ್ಯ ಬಲದ ಅಸೆಂಬ್ಲಿಯಲ್ಲಿ 56 ಸ್ಥಾನಗಳನ್ನು ಗೆದ್ದುಕೊಂಡಿತು. ಆದರೆ, ಬಿಜೆಪಿ ನೇತೃತ್ವದ ಎನ್ಡಿಎ 24 ಸ್ಥಾನಗಳನ್ನು ಪಡೆದುಕೊಂಡಿತು. ಹೇಮಂತ್ ಸೊರೇನ್ ಅವರು ಬಿಜೆಪಿಯ ಗಮ್ಲಿಯೆಲ್ ಹೆಂಬ್ರೋಮ್ ಅವರನ್ನು 39,791 ಮತಗಳ ಅಂತರದಿಂದ ಸೋಲಿಸುವ ಮೂಲಕ ಬರ್ಹೈತ್ ಸ್ಥಾನವನ್ನು ಉಳಿಸಿಕೊಂಡರು.
ಜೆಎಂಎಂ 43 ಸ್ಥಾನಗಳಲ್ಲಿ ಸ್ಪರ್ಧಿಸಿತು ಮತ್ತು 34 ಸ್ಥಾನಗಳನ್ನು ಗೆದ್ದುಕೊಂಡಿತು. ಇದು ಪಕ್ಷದ ಇತಿಹಾಸದಲ್ಲಿಯೇ ಅತ್ಯಧಿಕ ಮೊತ್ತವಾಗಿದೆ. ಇಂಡಿಯಾ ಬ್ಲಾಕ್ನಲ್ಲಿ ಕಾಂಗ್ರೆಸ್ 16 ಸ್ಥಾನಗಳನ್ನು, ಆರ್ಜೆಡಿ 4 ಸ್ಥಾನಗಳನ್ನು ಮತ್ತು ಸಿಪಿಐ (ಎಂಎಲ್) 2 ಸ್ಥಾನಗಳನ್ನು ಪಡೆದುಕೊಂಡಿದೆ. ಆರ್ಜೆಡಿಗೆ ಒಬ್ಬ ಸಚಿವ ಸ್ಥಾನ ಸಿಗಬಹುದು.
ಇದೇ ವೇಳೆ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಿದ್ಧತೆ ನಡೆದಿದೆ. ಹೇಮಂತ್ ಸೋರೆನ್ ಭಾನುವಾರ ರಾಜ್ಯಪಾಲ ಸಂತೋಷ್ ಕುಮಾರ್ ಗಂಗ್ವಾರ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಬಳಿಕ ಜಾರ್ಖಂಡ್ ರಾಜ್ಯದಲ್ಲಿನ ಇಂಡಿಯಾ ಬ್ಲಾಕ್ನ ನಾಯಕರು ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆ ಮಾಡಿದರು.