Search
Close this search box.

ಕಲಬುರಗಿ ಸೆಂಟ್ರಲ್ ಜೈಲ್ ಮುಖ್ಯ ಅಧೀಕ್ಷಕಿ ಕಾರು ಸ್ಫೋಟಿಸುವ ಬೆದರಿಕೆ

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡ ಬೆನ್ನಲ್ಲೇ ಜೈಲಿನ ಮುಖ್ಯ ಅಧೀಕ್ಷಕಿ ಅನಿತಾ ಅವರ ಕಾರು ಸ್ಫೊಟಿಸುವುದಾಗಿ ಬೆದರಿಕೆ ಸಂದೇಶ ಬಂದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸದ್ಯ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಬೆದರಿಕೆ ಸಂದೇಶದ ಬಗ್ಗೆ ತನಿಖೆ ನಡೆಯುತ್ತಿದೆ.

ಕಲಬುರಗಿ, ನವೆಂಬರ್ 28: ಕಲಬುರಗಿ ಸೆಂಟ್ರಲ್ ಜೈಲು ಮುಖ್ಯ ಅಧೀಕ್ಷಕಿ ಅನಿತಾ ಅವರ ಕಾರು ಸ್ಫೊಟಿಸುವುದಾಗಿ ಅನಾಮಧೇಯ ವ್ಯಕ್ತಿಯಿಂದ ಆಡಿಯೋ ಸಂದೇಶ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಕಾರು ಸ್ಫೊಟಿಸುವ

ಮೂಲಕ ಅನಿತಾ ಹತ್ಯೆಗೆ ಸಂಚು ಹೂಡಲಾಗಿದೆಯೇ ಎಂಬ ಅನುಮಾನ ಇದೀಗ ಬಲವಾಗಿದೆ. ಕಲಬುರಗಿ ನಗರದ ಪೊಲೀಸ್ ಇನ್ಸ್​ಪೆಕ್ಟರ್ ಮೊಬೈಲ್​ಗೆ ಆಡಿಯೋ ಸಂದೇಶ ಬಂದಿದೆ.

ಸದ್ಯ ಪೊಲೀಸ್ ಇನ್ಸ್​ಪೆಕ್ಟರ್ ಆಡಿಯೋ ಬೆದರಿಕೆ ಸಂದೇಶದ ಬಗ್ಗೆ ಸುಪರಿಂಟೆಂಡೆಂಟ್ ಗಮನಕ್ಕೆ ತಂದಿದ್ದಾರೆ. ಇದೀಗ ಬೆದರಿಕೆ ಸಂದೇಶದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಅನಿತಾ, ಸಿಸಿಟಿವಿ ಕಣ್ಗಾವಲಿನಲ್ಲೇ ಕಾರು ಪಾರ್ಕ್ ಮಾಡುವಂತೆ ಸೂಚನೆ ನೀಡಿದ್ದಾರೆ. ಜೈಲಿನ ಬಳಿ ಹಾಗೂ ಇತರೆಡೆಗಳಲ್ಲಿ ಎಲ್ಲೇ ಆದರೂ ಸಿಸಿಟಿವಿ ಇರುವ ಕಡೆ ಕಾರ್ ಪಾರ್ಕಿಂಗ್ ಮಾಡಲು ಸೂಚನೆ ನೀಡಿದ್ದಾರೆ.

ಒಂದೂವರೆ ತಿಂಗಳ ಹಿಂದೆಯಷ್ಟೆ ಅನಿತಾ ಕಲಬುರಗಿ ಜೈಲಿಗೆ ವರ್ಗಾವಣೆಯಾಗಿ ಬಂದಿದ್ದಾರೆ. ಅವರು ಅಧಿಕಾರ ಸ್ವೀಕಾರ ಮಾಡಿದ ದಿನವೇ ಜೈಲಿನಲ್ಲಿ ಕೈದಿಗಳು ಹೈಫೈ ಜೀವನ ನಡೆಸುತ್ತಿರುವುದು ಅನಾವರಣ ಆಗಿತ್ತು. ಇದನ್ನು ಅವರು ಗಂಭೀರವಾಗಿ ಪರಿಗಣಿಸಿದ್ದರು. ಕಾರಾಗೃಹ ಇಲಾಖೆ‌ ಕೂಡ ಗಂಭೀರವಾಗಿ ಪರಿಗಣಿಸಿ ಕ್ರಮಗಳನ್ನು ಕೈಗೊಂಡಿತ್ತು. ಬಳಿಕ ಅನಿತಾ ಜೈಲಿನಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಲು ಮುಂದಾಗಿದ್ದರು.

ಕೈದಿಗಳಿಂದಲೇ ಬಂತೇ ಬೆದರಿಕೆ ಸಂದೇಶ?

ಅನಿತಾ ಅವರು ಜೈಲಿನಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದ್ದರಿಂದ ಕೆರಳಿದ ಕೈದಿಗಳೇ ಬೆದರಿಕೆ ಸಂದೇಶ ಕಳುಹಿಸಿದರೇ ಎಂಬ ಅನುಮಾನ ಇದೀಗ ವ್ಯಕ್ತವಾಗಿದೆ.‌ ಜೈಲಿನಲ್ಲಿ ಬಿಡಿ, ಗುಟ್ಕಾ ಸಿಗರೇಟ್ ಬಂದ್ ಮಾಡಿದಕ್ಕೆ ಅನಿತಾ ವಿರುದ್ಧ ಬುಧವಾರವಷ್ಟೇ ಕೈದಿಗಳು ಪ್ರತಿಭಟನೆ ಮಾಡಿದ್ದರು. ಅದ್ಯಾವುದನ್ನೂ ಅನಿತಾ ಕ್ಯಾರೇ ಮಾಡಿರಲಿಲ್ಲ. ಹೀಗಾಗಿ ನಟೋರಿಯಸ್ ಕೈದಿಗಳು ಬೆದರಿಕೆ ತಂತ್ರ ಹೂಡಿದರೇ ಎಂಬ ಅನುಮಾನ ಮೂಡಿದೆ. ಅದೇನಿದ್ದರೂ, ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ.

VS NEWS DESK
Author: VS NEWS DESK

pradeep blr

ಬಿಸಿ ಬಿಸಿ ಸುದ್ದಿ

ಕ್ರಿಕೆಟ್ ಲೈವ್ ಸ್ಕೋರ್

ಚಿನ್ನ ಮತ್ತು ಬೆಳ್ಳಿ ಬೆಲೆಗಳು