ಬಿಜೆಪಿ ನಾಯಕ ಸಿ.ಟಿ.ರವಿ ಅವರು ಬೆಳಗಾವಿ ಅಧಿವೇಶನದ ಕಲಾಪದಲ್ಲಿ ಕಾಂಗ್ರೆಸ್ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದ ಬಳಸಿದ್ದಾರೆ ಎಂದು ಆರೋಪಿಸಿ ಪೊಲೀಸರು ಬಂಧಿಸಿದ್ದರು. ಬಳಿಕ ನಿನ್ನೆ ಕೋರ್ಟ್ ಸೂಚನೆ ಮೇರೆಗೆ ಬಿಡುಗಡೆಯೂ ಮಾಡಿದ್ದಾರೆ. ಇಂದು ಪತ್ರಿಕಾಗೋಷ್ಠಿ ನಡೆಸಿರುವ ಸಿ.ಟಿ.ರವಿ ಅವರು ತಮ್ಮ ಮೇಲಿನ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ.ಅಂದು ನಾವೆಲ್ಲ ಕಾಂಗ್ರೆಸ್‌ನವರು ಅಂಬೇಡ್ಕರ್ ಅವರಿಗೆ ಹೇಗೆಲ್ಲ ಅವಮಾನ ಮಾಡಿದ್ದರು ಎಂಬುದನ್ನು ಸದನದಲ್ಲಿ ಹೇಳುತ್ತಿದ್ದೆವು. ಈ ವೇಳೆ ಅಲ್ಲಿ ಗದ್ದಲವಾಯಿತು. ಕೊನೆಗೆ ನಾನು ಮಾಧ್ಯಮದವರ ಜೊತೆ ಮಾತನಾಡಲು ಹೊರಹೋದೆ. ಅಲ್ಲಿಂದ ಬರುವಾಗ ಪತ್ರಕರ್ತರೇ ನನ್ನ ಮೇಲೆ ಇಂತಹ ಆರೋಪ ಇದೆ ಎಂದು ಗಮನಕ್ಕೆ ತಂದರು ಎಂದು ಸಿ.ಟಿ.ರವಿ ಹೇಳಿದ್ದಾರೆ.
ನಾನು ಸಾಮಾನ್ಯವಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಯಾವಾಗ ಎದುರಿಗೆ ಸಿಕ್ಕರೂ ಏನ್ ಲಕ್ಷಕ್ಕ ಹೇಗಿದ್ದೀರಿ? ಎಂದೇ ಮಾತನಾಡಿಸುತ್ತಿದ್ದೆ. ಅಷ್ಟು ಗೌರವದಿಂದಲೇ ನಾನು ಅವರನ್ನು ಮಾತನಾಡಿಸುತ್ತೇನೆ ಎಂಬುದನ್ನು ಹೇಳಲು ಇಚ್ಛಿಸುತ್ತೇನೆ. ಇನ್ನು ಆ ದಿನ ಏನಾಯಿತು ಎಂದು ವಿವರಿಸಲು ನಾನು ಹೋಗುವುದಿಲ್ಲ. ಸಭಾಪತಿಗಳು ಈಗಾಗಲೇ ಈ ಬಗ್ಗೆ ಮಾತನಾಡಿರುವುದರಿಂದ ನಾನು ಮತ್ತೆ ವಿವರಿಸಲು ಹೋಗುವುದಿಲ್ಲ ಎಂದಿದ್ದಾರೆ.
ನಾನೇನು ಮಾತನಾಡಿದೆ, ಅವರೇನು ಮಾತನಾಡಿದ್ರು ಎನ್ನುವುದು ಕೆಲವೊಮ್ಮೆ ದಾಖಲಾಗದೆ ಇರಬಹುದು. ಆದರೆ, ಅಂತರಾತ್ಮ ತಪ್ಪಿಸಿ ಏನೂ ನಡೆಯುವುದಿಲ್ಲ. ಹಾಗಾಗಿ ಇದನ್ನು ಹೆಚ್ಚಿಗೆ ಮಾತನಾಡಲು ನನಗೂ ಇಷ್ಟವಿಲ್ಲ ಎಂದಿದ್ದಾರೆ. ಪೊಲೀಸರು ನನ್ನನ್ನ ಬಂಧಿಸಿದಾಗ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನನ್ನ ಬೆಂಬಲಕ್ಕೆ ನಿಂತರು ಎಂದು ನೆನೆದಿದ್ದಾರೆ.
ಇನ್ನು ಬೆಳಗಾವಿ ಸುವರ್ಣ ವಿಧಾನಸೌಧದ ಕಾರಿಡಾರ್ನಿಂದ ಹೊರಗೆ ಬರುವಾಗ ಮೂರ್ನಾಲ್ಕು ಜನರು ನನ್ನ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ರು. ಇಲ್ಲಿಂದ ನಿನ್ನ ಹೆಣ ಕಳಿಸುತ್ತೇವೆ ಎಂದು ಧಮ್ಕಿ ಹಾಕಿದರು. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಲಕ್ಷ್ಮಿ ಹೆಬ್ಬಾಳ್ಕರ್, ನಜೀರ್ ಅಹ್ಮದ್ ಸೇರಿದಂತೆ ಕೆಲ ಕಾಂಗ್ರೆಸ್ ನಾಯಕರು ನನ್ನ ಮೇಲೆ ಏನೇನೋ ಮಾತನಾಡಿದರು. ನಿನ್ನ ಕತೆ ಮುಗಿಸ್ತೀವಿ ಎಂದೂ ಎಚ್ಚರಿಕೆ ಕೊಟ್ಟರು, ಕೊನೆಗೆ ನಾನು ಅಲ್ಲಿದ್ದ ಮಾರ್ಷಲ್‌ಗಳ ರಕ್ಷಣೆ ಪಡೆದು ಸಭಾಪತಿಗಳ ಬಳಿಗೆ ತೆರಳಿದೆ ಎಂದು ಹೇಳಿದ್ದಾರೆ.
ಸಿ.ಟಿ.ರವಿ ಪತ್ನಿ ಹೇಳಿದ್ದೇನು?: ಪತಿ ಸಿ.ಟಿ.ರವಿ ಅವರು ಮೊದಲಿನಿಂದಲೂ ಪಕ್ಷ ಎಂದು ಹಗಲು ರಾತ್ರಿ ಹೋರಾಟ ಮಾಡುತ್ತಾ ಬಂದವರು. ಹಾಗಾಗಿ ಅವರ ಬಂಧನದ ವಿಚಾರ ನಮಗೆ ಮೊದಲಿಗೆ ಅಂತಹ ಭಯ ಹುಟ್ಟಿಸಲಿಲ್ಲ. ಆದರೆ, ರಾತ್ರಿಯಿಡೀ ಅವರನ್ನು ಪೊಲೀಸರು ಎಲ್ಲೆಲ್ಲೋ ಸುತ್ತಾಡಿಸಿದ ವಿಚಾರ ತಿಳಿದು ಭಯವಾಗಿದ್ದು ನಿಜ ಎಂದು ಸಿ.ಟಿ.ರವಿ ಪತ್ನಿ ಹೇಳಿದ್ದಾರೆ.
ಎಂತಹ ಭಯೋತ್ಪಾದಕ ಕೆಲಸ ಮಾಡಿದವರಿಗೆ ರಾಜ ಮರ್ಯಾದೆ ಕೊಟ್ಟು ನೋಡಿಕೊಂಡಿದ್ದಾರೆ. ಆದರೆ, ತಪ್ಪೇ ಮಾಡದ ನನ್ನ ಪತಿಯನ್ನು ಈ ರೀತಿ ನಡೆಸಿಕೊಂಡಿದ್ದಾರೆ. ಒಬ್ಬ ರಾಜಕಾರಣಿ, ಶಾಸಕರ, ಸಚಿವ, ಎಂಎಲ್‌ಸಿ ಆಗಿದ್ದವರನ್ನು ಇಷ್ಟು ಕೆಟ್ಟದಾಗಿ ನಡೆಸಿಕೊಂಡಿರುವುದು ತುಂಬಾ ಬೇಸರ ತರಿಸಿದೆ, ಇನ್ನು ಸಾಮಾನ್ಯ ಜನರ ಪಾಡೇನು? ಎಂದು ಪ್ರಶ್ನಿಸಿದ್ದಾರೆ.
Author: VS NEWS DESK
pradeep blr