1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮವು ಡಿಸೆಂಬರ್ 26 ಮತ್ತು 27ರಂದು ನಡೆಯಲಿದೆ. ಬೆಳಗಾವಿಯಲ್ಲಿ ಎರಡು ದಿನಗಳ ಕಾರ್ಯಕ್ರಮದ ಮೂಲಕ ಶತಮಾನೋತ್ಸವ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ಮೊದಲ ದಿನ ಡಿಸೆಂಬರ್ 26ರಂದು ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ನಡೆಯಲಿದೆ. 27ರಂದು ಸಾರ್ವಜನಿಕ ಸಮಾರಂಭ ನಡೆಯಲಿದೆ.ಈ ಕಾರ್ಯಕ್ರಮವನ್ನು ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಶತಮಾನೋತ್ಸವ ಆಚರಣೆ ಸಂಬಂಧವಾಗಿ ರಚಿಸಲಾಗಿರುವ ಸಚಿವರು ಹಾಗೂ ಸಂಸತ್ ಸದಸ್ಯರನ್ನು ಒಳಗೊಂಡ ವಿವಿಧ ಸಮಿತಿಗಳು ಕೈಗೊಂಡ ಸಿದ್ಧತೆಗಳ ಪರಿಶೀಲನಾ ಸಭೆಯಲ್ಲಿ ಸಿದ್ದರಾಮಯ್ಯ ಸೂಚನೆಗಳನ್ನು ನೀಡಿದ್ದಾರೆ.
ಶತಮಾನೋತ್ಸವ ಸಮಾರಂಭಕ್ಕೆ ರಾಷ್ಟ್ರದೆಲ್ಲೆಡೆಯಿಂದ ಸಂಸದರು, ಗಣ್ಯರು ಆಗಮಿಸಲಿದ್ದು, ಅವರಿಗೆ ವಸತಿ, ಊಟೋಪಚಾರ ಸೇರಿದಂತೆ ಸೂಕ್ತ ಆತಿಥ್ಯ ವ್ಯವಸ್ಥೆ ಕಲ್ಪಿಸುವುದು ಸಂಬಂಧಿಸಿದ ಸಮಿತಿಗಳ ಕೆಲಸ ಎಂದು ಜವಾಬ್ದಾರಿ ನೀಡಿದ್ದಾರೆ. ಡಿಸೆಂಬರ್ 27ರಂದು ಸುವರ್ಣಸೌಧದ ಆವರಣದಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆ ಅನಾವರಣ ನೆರವೇರಲಿದೆ. ಇದೇ ಸಂದರ್ಭದಲ್ಲಿ ಹಲವು ಸ್ವಾತಂತ್ರ್ಯ ಹೋರಾಟಗಾರರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವ ಬಗ್ಗೆ ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.1924ರಲ್ಲಿ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ʼಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡುʼ ಹಾಡನ್ನು ಪ್ರಥಮ ಬಾರಿಗೆ ಗಂಗೂಬಾಯಿ ಹಾನಗಲ್ ಅವರು ಹಾಡಿದ್ದರು. ಈಗ ಆ ಹಾಡಿಗೂ ನೂರು ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ಆ ಹಾಡನ್ನು ಶತಮಾನೋತ್ಸವ ಆಚರಣೆಯಲ್ಲಿ ಮತ್ತೆ ಹಾಡಿಸುವ ಕುರಿತು ತೀರ್ಮಾನಿಸಲಾಗಿದೆ ಎಂದಿದ್ದಾರೆ. ಮಹಾತ್ಮಾ ಗಾಂಧಿ ಅವರ ಅಧ್ಯಕ್ಷತೆಯ ಬೆಳಗಾವಿ ಅಧಿವೇಶನದಲ್ಲಿ ಕರ್ನಾಟಕ ಏಕೀಕರಣದ ಮೊದಲ ಧ್ವನಿ ಬಲವಾಗಿ ಪ್ರತಿಪಾದಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಮಾವೇಶ ಕನ್ನಡಿಗರ ಪಾಲಿಗೂ ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ.
ಸರ್ಕಾರದಿಂದ ಏನೆಲ್ಲ ಸಿದ್ಧತೆ?: ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಹಿನ್ನೆಲೆ ಮಹಾತ್ಮಾ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ 1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಅಂಗವಾಗಿ ಡಿಸೆಂಬರ್ 26 ಮತ್ತು 27ರಂದು ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಶತಮಾನೋತ್ಸವ ಅಂಗವಾಗಿ ವರ್ಷವಿಡೀ ʻಗಾಂಧೀ ಭಾರತʼ ಹೆಸರಿನಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳು ನಡೆಯಲಿವೆ. ಮೈಸೂರು ದಸರಾ ಮಾದರಿಯಲ್ಲಿ ಬೆಳಗಾವಿ ನಗರದ ಪ್ರಮುಖ 32 ಕಿಮೀ ಉದ್ದದ ರಸ್ತೆ ಹಾಗೂ 30 ವೃತ್ತಗಳಲ್ಲಿ ದೀಪಾಲಂಕಾರ ಇರಲಿದೆ. ಕಾಂಗ್ರೆಸ್ ಅಧಿವೇಶನ ನಡೆದ ಸ್ಥಳದಲ್ಲಿ ವೀರಸೌಧ ಅಭಿವೃದ್ಧಿ ಮಾಡುವುದು, ಈ ಸ್ಥಳದಲ್ಲಿ ಗ್ರಂಥಾಲಯ ಮತ್ತು ಗಾಂಧಿ ಪ್ರತಿಮೆ ಅನಾವರಣಗೊಳ್ಳಲಿದೆ.ಬೆಳಗಾವಿಯ 2.1 ಕಿ.ಮೀ ಉದ್ದದ ಕಾಂಗ್ರೆಸ್ ರಸ್ತೆಯಲ್ಲಿ ಶತಮಾನೋತ್ಸವದ ಸ್ಮಾರಕವಾಗಿ ತಾತ್ಕಾಲಿಕ ವಿರೂಪಾಕ್ಷ ಗೋಪುರ ನಿರ್ಮಾಣ, ರೈಲು ಮಾರ್ಗದ ತಡೆಗೋಡೆಯುದ್ದಕ್ಕೂ ಉಬ್ಬು ಶಿಲ್ಪಗಳ ನಿರ್ಮಾಣ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಿದ್ದಾರೆ. ಸುವರ್ಣ ವಿಧಾನಸೌಧದಲ್ಲಿ ಕಾಂಗ್ರೆಸ್ ಅಧಿವೇಶನ, ಸ್ವಾತಂತ್ರ್ಯ ಚಳವಳಿಯನ್ನು ಪ್ರತಿಬಿಂಬಿಸುವ ಛಾಯಾಚಿತ್ರ ಗ್ಯಾಲರಿ ನಿರ್ಮಾಣವಾಗಲಿದೆ.
ಡಿಸೆಂಬರ್ 26ರಂದು ಗಣ್ಯ ಪ್ರತಿನಿಧಿಗಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಡಿ.27ರಂದು ಸಾರ್ವಜನಿಕರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಶತಮಾನೋತ್ಸವದ ನೆನಪಾರ್ಥ ವಿಶೇಷ ಅಂಚೆ ಚೀಟಿ ಬಿಡುಗಡೆ, ವರ್ಷವಿಡೀ ಎಲ್ಲ ಶಾಲೆಗಳಲ್ಲಿ ʻಗಾಂಧಿ ಭಾರತʼ ಅಡಿಯಲ್ಲಿ ʻನಾವು ಮನುಜರುʼ ಕಾರ್ಯಕ್ರಮಗಳ ಆಯೋಜನೆ ಹಾಗೂ ಮಕ್ಕಳಲ್ಲಿ ಗಾಂಧೀಜಿ ಅವರ ವಿಚಾರಧಾರೆ ಬಗ್ಗೆ ಅರಿವು ಮೂಡಿಸಲು ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಯೋಜಿಸಲಾಗುತ್ತಿದೆ.
Author: VS NEWS DESK
pradeep blr