ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!

ಮೆಲ್ಬೋರ್ನ್​ ಮೈದಾನದಲ್ಲಿ ಟೆಸ್ಟ್ ಶತಕ ಸಿಡಿಸಿದ ಕೆಲವೇ ಕೆಲವು ಬ್ಯಾಟರ್​ಗಳ ಪಟ್ಟಿಯಲ್ಲಿ ಇನ್ಮುಂದೆ ನಿತೀಶ್ ಕುಮಾರ್ ರೆಡ್ಡಿ ಹೆಸರು ಕೂಡ ಕಾಣಿಸಿಕೊಳ್ಳಲಿದೆ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯದಲ್ಲಿ ಯುವ ದಾಂಡಿಗ ಭರ್ಜರಿ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಅದು ಸಹ ಅನುಭವಿ ಆಸ್ಟ್ರೇಲಿಯಾ ಬೌಲರ್​ಗಳ ಮುಂದೆ ಸೆಟೆದು ನಿಲ್ಲುವ ಮೂಲಕ..!

ಎಂಸಿಜಿ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 4ನೇ ಪಂದ್ಯದಲ್ಲಿ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿತೀಶ್ ಕುಮಾರ್ ರೆಡ್ಡಿ 171 ಎಸೆತಗಳಲ್ಲಿ ಶತಕ ಪೂರೈಸಿದರು. ಅತ್ತ ಟೀಮ್ ಇಂಡಿಯಾ 9 ವಿಕೆಟ್ ಕಳೆದುಕೊಂಡಿದ್ದರಿಂದ ನಿತೀಶ್ ಶತಕ ಪೂರೈಸಲಿದ್ದಾರಾ ಎಂಬುದೇ ಎಲ್ಲರ ಚಿಂತೆಗೆ ಕಾರಣವಾಗಿತ್ತು.
ಅದರಲ್ಲೂ ಮೈದಾನದಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ ಮುತ್ಯಾಲ ರೆಡ್ಡಿ ಕ್ಷಣ ಕ್ಷಣಕ್ಕೂ ಟೆನ್ಷನ್​ ಅನುಭವಿಸಿದ್ದರು. ಈ ಹಂತದಲ್ಲಿ ರಕ್ಷಣಾತ್ಮಕ ಆಟವಾಡುವ ಮೂಲಕ ಸಿರಾಜ್ ನಿತೀಶ್ ಕುಮಾರ್ ರೆಡ್ಡಿಗೆ ಸ್ಟ್ರೈಕ್ ನೀಡಿದರು.

ಕೊನೆಯ ವಿಕೆಟ್​ ವೇಳೆ ಸಿಕ್ಕ ಸ್ಟ್ರೈಕ್​ನಲ್ಲಿ ಫೋರ್​ ಬಾರಿಸುವ ಮೂಲಕ ನಿತೀಶ್ ಕುಮಾರ್ ರೆಡ್ಡಿ ಚೊಚ್ಚಲ ಶತಕ ಪೂರೈಸಿದರು. ಅತ್ತ ಮಗ ಸೆಂಚುರಿ ಸಿಡಿಸಿ ಸಂಭ್ರಮಿಸುತ್ತಿದ್ದರೆ, ಅತ್ತ ಮೈದಾನ ಬಳಿ ನಿಂತು ಪಂದ್ಯ ವೀಕ್ಷಿಸುತ್ತಿದ್ದ ಅವರ ತಂದೆ ಮುತ್ಯಾಲ ರೆಡ್ಡಿ ಆನಂದ ಭಾಷ್ಪದೊಂದಿಗೆ ಸಂಭ್ರಮಿಸಿದರು. ಇದೀಗ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆಯ ಕಣ್ಣೀರ ಸಂಭ್ರಮದ ವಿಡಿಯೋ ವೈರಲ್ ಆಗಿದ್ದು, ಕ್ರಿಕೆಟ್ ಪ್ರೇಮಿಗಳಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಬಿಸಿ ಬಿಸಿ ಸುದ್ದಿ

ಕ್ರಿಕೆಟ್ ಲೈವ್ ಸ್ಕೋರ್

ಚಿನ್ನ ಮತ್ತು ಬೆಳ್ಳಿ ಬೆಲೆಗಳು