ಕಲಬುರಗಿ: ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಜೇವರ್ಗಿ ರಸ್ತೆ ಸಮೀಪದ ಹಸನಾಪುರ ಬಳಿ ಬುಧವಾರ ರಾತ್ರಿ ಸಂಭವಿಸಿದ ಸರಣಿ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.
ಮೌಲಾಬಿ ಎಂಬ ಮಹಿಳೆ ಹೆಸರಿನ ಗುರುತಿನ ಚೀಟಿಯೊಂದು ಸ್ಥಳದಲ್ಲಿ ಪತ್ತೆಯಾಗಿದ್ದರಿಂದ ಮೃತರಲ್ಲಿ ಅವರೊಬ್ಬರು ಇರಬಹುದು ಎಂದು ಪೊಲೀಸರು ಗುರುತಿಸುತ್ತಿದ್ದಾರೆ. ಉಳಿದಂತೆ ಮೃತರ ಹೆಸರು, ವಿವರ ತಡರಾತ್ರಿಯವರೆಗೂ ಪತ್ತೆಯಾಗಿರಲಿಲ್ಲ. ಬೈಕ್ ಸವಾರ ಹಾಗೂ ಕಾರಿನಲ್ಲಿದ್ದ ಮೂವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಜೇವರ್ಗಿ-ಕಲಬುರಗಿ ಹೆದ್ದಾರಿಯಲ್ಲಿ ಹಸನಾಪುರ ಬಳಿ ವೇಗವಾಗಿ ಬಂದ ಬೈಕ್ ಸವಾರ ಲಾರಿಗೆ ಢಿಕ್ಕಿ ಹೊಡೆದಿದ್ದಾನೆ. ಹೊಡೆತದ ರಭಸಕ್ಕೆ ಬೈಕ್ ಲಾರಿ ಅಡಿಗೆ ಸಿಲುಕಿ, ಸ್ವಲ್ಪ ದೂರ ಎಳೆದುಕೊಂಡು ಹೋಗಿದೆ. ಕೂಡಲೇ ಲಾರಿಯ ಚಾಲಕ ಬ್ರೇಕ್ ಹಾಕಿದಾಗ, ಹಿಂದಿನಿಂದ ಬರುತ್ತಿದ್ದ ಕಾರ್ ನಿಯಂತ್ರಣ ತಪ್ಪಿ ಲಾರಿಗೆ ಹಿಂದಿನಿಂದ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಸರಣಿ ಅಪಘಾತದಿಂದ ಹೆದ್ದಾರಿಯಲ್ಲಿ ಕೆಲಹೊತ್ತು ಸಂಚಾರ ಸ್ಥಗಿತಗೊಂಡಿತ್ತು. ಇಬ್ಬರ ಮೃತದೇಹ ಜೇವರ್ಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಇನ್ನಿಬ್ಬರನ್ನು ಕಲಬುರಗಿ ಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರೆಳೆದಿದ್ದಾರೆ. ಅವರ ಮೃತದೇಹಗಳನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಶಿಫ್ಟ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ, ಡಿಸಿಪಿ ಕನ್ನಿಕಾ ಸಿಕ್ರಿವಾಲ್, ಪ್ರವೀಣ್ ನಾಯಕ್, ಸಂಚಾರ ಎಸಿಪಿ ಇಸ್ಮಾಯಿಲ್ ಷರೀಫ್, ಇನ್ಸ್ಪೆಕ್ಟರ್ ಮಹಾಂತೇಶ ಪಾಟೀಲ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತಾಗಿ ಕಲಬುರಗಿ ಸಂಚಾರ ಠಾಣೆ – 1ರಲ್ಲಿ ಪ್ರಕರಣ ದಾಖಲಾಗಿದೆ
Author: VS NEWS DESK
pradeep blr