ಖಾತಾ ವಿಚಾರದಲ್ಲಿ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಹತ್ವದ ನಿರ್ಧಾರ ಕೈಗೊಂಡಿದ್ದು, ಯೋಜನಾ ಮಂಡಳಿಯ ಅನುಮೋದನೆಯನ್ನು ಹೊಂದಿರದ ಏಕ ನಿವೇಶನ ಸ್ವತ್ತುಗಳಿಗೆ (ಪ್ಲಾಟ್) ಕೃಷಿಯೇತರ ಬಳಕೆಗೆ ಪರಿವರ್ತಿಸಿದ್ದರೂ ಸಹ ಎ ಅಥವಾ ಬಿ ಖಾತಾ ನೀಡುವುದನ್ನು ನಿಲ್ಲಿಸಿದೆ ಎಂದು ವರದಿಯಾಗಿದೆ.
ವಿಶೇಷವಾಗಿ ಬೆಂಗಳೂರು ನಗರದ ಹೊರವಲಯದಲ್ಲಿ ಅವ್ಯವಸ್ಥಿತ ಅಭಿವೃದ್ಧಿಗೆ ಕಡಿವಾಣ ಹಾಕುವ ಉದ್ದೇಶದಿಂದ ತೆಗೆದುಕೊಳ್ಳಲಾಗಿರುವ ಈ ನಿರ್ಧಾರದಿಂದ ಅನುಮೋದಿಸದ ಸೈಟ್‌ಗಳ ಮಾರಾಟವನ್ನು ನಿರ್ಬಂಧಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಏಕೆಂದರೆ ಈ ನಿರ್ಧಾರದಿಂದ ಖರೀದಿದಾರರು ಕಟ್ಟಡ ಯೋಜನೆ ಅನುಮೋದನೆಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಎಂದು ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಈ ವರ್ಷ ಅಕ್ಟೋಬರ್‌ನಲ್ಲಿ ಈ ಸಂಬಂಧ ಆದೇಶ ಹೊರಡಿಸಿದೆ. ಬಿಡಿಎ ಕೂಡ 20,000 ಚದರ ಮೀಟರ್‌ವರೆಗೆ ವಿಸ್ತೀರ್ಣದ ಸಿಂಗಲ್ ಪ್ಲಾಟ್‌ಗಳನ್ನು ಅನುಮೋದಿಸುವ ಅಧಿಕಾರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಇರುತ್ತದೆ ಎಂದು ಪತ್ರದಲ್ಲಿ ತಿಳಿಸಿದೆ. ಅಲ್ಲದೆ, ಬಿಬಿಎಂಪಿಯು ಬಿಡಿಎ ಇಂದ ರಚಿಸಲ್ಪಟ್ಟ ಅಥವಾ ಅನುಮೋದಿಸಲ್ಪಟ್ಟ ಬಡಾವಣೆಗಳ ವ್ಯಾಪ್ತಿಯಲ್ಲಿ ಬರುವ ಅಥವಾ ಎ ಖಾತಾ ಆಸ್ತಿಗಳೆಂದು ವರ್ಗೀಕರಿಸಲಾದ ಸೈಟ್‌ಗಳಿಗೆ ಮಾತ್ರ ಕಟ್ಟಡ ಪರವಾನಗಿಗಳನ್ನು ನೀಡಬೇಕು ಎಂದು ಬಿಡಿಎ ತಿಳಿಸಿದೆ.
ಇನ್ನು ಬೆಂಗಳೂರಿನ ರಸ್ತೆಗಳು, ಉದ್ಯಾನವನಗಳು ಮತ್ತು ನಾಗರಿಕ ಸೌಕರ್ಯಗಳಂತಹ ಸಾರ್ವಜನಿಕರಿಗೆ ಯೋಗ್ಯವಾದ ಸಾಕಷ್ಟು ಸ್ಥಳಾವಕಾಶವನ್ನು ಒದಗಿಸುವ ಮೂಲಕ ಉತ್ತಮ ಯೋಜನೆಯನ್ನು ಸಾಧಿಸಬಹುದು ಎಂಬ ಉದ್ದೇಶದೊಂದಿಗೆ ಈ ಆದೇಶ ಹೊರಡಿಸಲಾಗಿದೆ. ಬಿಬಿಎಂಪಿಯ ಈ ನಿರ್ಧಾರವು ಹೊರ ಪ್ರದೇಶಗಳಲ್ಲಿ ನೆಲೆಗೊಂಡಿರುವ ಆಸ್ತಿಗಳ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ. ಬೇರೆ ಪ್ರದೇಶಗಳಿಗೆ ಹೋಲಿಸಿದರೆ ಅಲ್ಲಿ ಹೆಚ್ಚಿನ ಸಂಖ್ಯೆಯ ಅನುಮೋದನೆಯಾಗದ ಲೇಔಟ್‌ಗಳಿವೆ ಎಂದು ಹೇಳಲಾಗುತ್ತಿದೆ.
ಆದರೂ ಈ ವರ್ಷ ಸೆಪ್ಟೆಂಬರ್ 30ರ ಮೊದಲು ನೋಂದಾಯಿಸಲಾದ ಆಸ್ತಿಗಳಿಗೆ ಖಾತಾ ನೀಡುವ ಮೇಲಿನ ನಿರ್ಬಂಧವು ಅನ್ವಯಿಸುವುದಿಲ್ಲ. ಯೋಜನಾ ಅಧಿಕಾರಿಗಳಿಂದ ಅನುಮೋದಿಸದಿದ್ದರೂ ಅಂತಹ ಆಸ್ತಿಗಳಿಗೆ ಬಿ ಖಾತಾ ನೀಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆದೇಶದಲ್ಲಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಬಿಬಿಎಂಪಿಯ ಈ ಆದೇಶದಿಂದ ಆಸ್ತಿ ಮಾಲೀಕರು, ಬಿಲ್ಡರ್‌ಗಳು ಮತ್ತು ವಕೀಲರಲ್ಲಿ ಗೊಂದಲ ಸೃಷ್ಟಿಯಾಗಿದೆ ಎಂದು ಹೇಳಲಾಗುತ್ತಿದೆ. ಅಕ್ಟೋಬರ್ ಆದೇಶವನ್ನು ಉಲ್ಲೇಖಿಸಿ ಕೆಲವು ನಾಗರಿಕರ ಕಟ್ಟಡ ಪರವಾನಗಿಗಾಗಿ ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸುತ್ತಿದ್ದು, ಪಾಲಿಕೆ ಕೇಂದ್ರ ಕಚೇರಿಗೆ ಅಲೆದಾಟ ನಡೆಸುತ್ತಿದ್ದಾರಂತೆ. ಅಲ್ಲದೆ ಕಟ್ಟಡದ ಅನುಮತಿ ನೀಡಲು ಬಿಬಿಎಂಪಿ ಸಿದ್ಧವಿಲ್ಲದ ಕಾರಣ ಈಗಿನ ಮೊಮ್ಮಕ್ಕಳು ತನ್ನ ತಾತ ನಿರ್ಮಿಸಿದ ಮನೆಗಳನ್ನು ಕೆಡವಲು ಕೂಡ ಸಾಧ್ಯವಾಗದ ಹಲವು ನಿದರ್ಶನಗಳಿವೆ ಎಂದು ಹೇಳಲಾಗುತ್ತಿದೆ.
Author: VS NEWS DESK
pradeep blr