Search
Close this search box.

ರಾಜ್ಯದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲದ ವಿಪಕ್ಷ ನಾಯಕ ಆರ್.ಅಶೋಕ್ : ರಮೇಶ್ ಬಾಬು ಟೀಕೆ

ಬೆಂಗಳೂರು : ಬಿಜೆಪಿಯಲ್ಲಿ ಅನೇಕ ಹಿರಿಯರ ತುಳಿದು ವಿರೋಧ ಪಕ್ಷದ ಸ್ಥಾನ ಗಿಟ್ಟಿಸಿಕೊಂಡ ಆರ್.ಅಶೋಕ್ ರಾಜ್ಯದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಬದಲು, ರಾಜಕೀಯ ಭಾಷಣ ಮಾಡಿಕೊಂಡು ಅಲೆದಾಡುತ್ತಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಟೀಕಿಸಿದ್ದಾರೆ.

ರವಿವಾರ ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕರ್ನಾಟಕದ ಹೊಂದಾಣಿಕೆ ರಾಜಕಾರಣದ ಪಿತಾಮಹ ಖ್ಯಾತಿಯ ಆರ್.ಅಶೋಕ್ ಅವರು 2013ರ ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಹೊಂದಾಣಿಕೆ ಮಾಡಿಸಿ ಅನಿತಾ ಕುಮಾರಸ್ವಾಮಿ ಮತ್ತು ಪುಟ್ಟರಾಜು ಅವರಿಗೆ ಕೈಕೊಟ್ಟು ದೇವೇಗೌಡರಿಂದ ಛೀಮಾರಿ ಹಾಕಿಸಿಕೊಂಡ ಘಟನೆ ಮಾಸುವ ಮುನ್ನವೇ ಚನ್ನಪಟ್ಟಣದಲ್ಲಿ ಹೊಸ ನಾಟಕ ಆರಂಭಿಸಿರುವುದಾಗಿ ರಮೇಶ್ ಬಾಬು ತಿಳಿಸಿದ್ದಾರೆ.

ಉಪ ಚುನಾವಣೆ ಪೂರ್ವದಲ್ಲಿ ಪಕ್ಷೇತರವಾಗಿ ಸ್ಪರ್ಧೆ ಮಾಡುವಂತೆ ಸಿ.ಪಿ.ಯೋಗೀಶ್ವರ್ ಅವರಿಗೆ ಚಿತಾವಣೆ ಮಾಡಿದ ಅಶೋಕ್, ಪ್ರತಿದಿನ ಒಂದೊಂದು ವೇಷ ಹಾಕುತ್ತಿದ್ದಾರೆ ಎಂದು ರಮೇಶ್ ಬಾಬು ಹೇಳಿದ್ದಾರೆ.

ಕರ್ನಾಟಕದ ನವರಂಗಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಚನ್ನಪಟ್ಟಣದ ಉಪಚುನಾವಣೆಯಲ್ಲಿ ಮಾತನಾಡುವಾಗ ಕಾಂಗ್ರೆಸ್ ಪಕ್ಷದ ದುರಾಡಳಿತದ ವಿರುದ್ಧ ಉಪಚುನಾವಣೆ ನಡೆಯುತ್ತಿದೆ ಎಂಬ ಹೇಳಿಕೆ ನೀಡಿದ್ದು, ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಉಪಚುನಾವಣೆಗಳನ್ನು ದುರಾಡಳಿತದ ಮೇಲೆ ನಡೆಸುವ ಅವಶ್ಯಕತೆ ಇಲ್ಲ ಎಂದು ರಮೇಶ್ ಬಾಬು ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಮೇಲೆ ಆರೋಪ ಮಾಡುತ್ತಿರುವುದು ಅಶೋಕ್ ಅವರ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಉಳಿಸಿಕೊಳ್ಳುವ ಹತಾಶ ಪ್ರಯತ್ನವಾಗಿದೆ. ಪದ್ಮನಾಭನಗರದ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಬಾರಿ ಜೆಡಿಎಸ್ ನಾಯಕರು ಜೊತೆ ಹೊಂದಾಣಿಕೆ ಮಾಡಿಕೊಂಡು ಗೆಲ್ಲುವ ಅಶೋಕ್ ಅವರು, ತಾವು ಸಮರ್ಥ ವಿರೋಧ ಪಕ್ಷದ ನಾಯಕರು ಎಂಬುದನ್ನು ಇದುವರೆಗೆ ರುಜುವಾತು ಮಾಡಲು ಸಾಧ್ಯವಾಗಿಲ್ಲ ಎಂದು ರಮೇಶ್ ಬಾಬು ಆರೋಪಿಸಿದ್ದಾರೆ.

ಬಿಜೆಪಿ ಸರಕಾರದಲ್ಲಿ ಗೃಹ ಸಚಿವರಾಗಿ ವೈಫಲ್ಯ ಕಂಡ ಅಶೋಕ್ ಕಾನೂನು ಸುವ್ಯವಸ್ಥೆ ಕಾಪಾಡಲಿಲ್ಲ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಲೊಟ್ಟೆಗೊಲ್ಲಹಳ್ಳಿ ಭೂ ಪ್ರಕರಣದಲ್ಲಿ ಮಾಡಿರಬಹುದಾದ ವಂಚನೆ, ಅವರ ಶಿಕ್ಷಣ ಸಂಸ್ಥೆಗೆ ಪಡೆದಿರುವ ಅಕ್ರಮ ಭೂಮಿ, ಕಂದಾಯ ಸಚಿವರಾಗಿ ಅಕ್ರಮವಾಗಿ ಹಂಚಿರುವ ಭೂಮಿಯ ಆರೋಪಗಳಿಗೆ ಸಾರ್ವಜನಿಕವಾಗಿ ಇಲ್ಲಿಯವರೆಗೆ ಉತ್ತರ ನೀಡದೆ ಪಲಾಯನ ಮಾಡುರುವ ಅಶೋಕ್ ಅವರಿಗೆ ಕಾಂಗ್ರೆಸ್ ಸರಕಾರದ ಬಗ್ಗೆ ಪ್ರಶ್ನಿಸುವ ಯಾವುದೇ ನೈತಿಕತೆ ಇಲ್ಲ ಎಂದು ರಮೇಶ್ ಬಾಬು ತಿಳಿಸಿದ್ದಾರೆ.

VS NEWS DESK
Author: VS NEWS DESK

pradeep blr