Search
Close this search box.

‘ವಕ್ಫ್ ಆಸ್ತಿ’ ರಾಜಕೀಯ ಲಾಭದ ದುರುದ್ದೇಶಕ್ಕಾಗಿ ಬಿಜೆಪಿ ಪ್ರತಿಭಟನೆ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ‘ವಕ್ಫ್ ಆಸ್ತಿಯ ವಿವಾದಕ್ಕೆ ಸಂಬಂಧಿಸಿದಂತೆ ರೈತರಿಗೆ ನೀಡಲಾಗಿರುವ ನೋಟಿಸ್‍ಗಳನ್ನು ತಕ್ಷಣ ವಾಪಸ್ ಪಡೆಯಲು ಸರಕಾರ ಸೂಚನೆ ನೀಡಿದ ನಂತರವೂ ಬಿಜೆಪಿ ನಾಯಕರು ಪ್ರತಿಭಟನೆಗೆ ಮುಂದಾಗಿರುವುದು ರಾಜಕೀಯ ಲಾಭದ ದುರುದ್ದೇಶವೇ ಹೊರತು, ಇದರಲ್ಲಿ ರೈತರ ಹಿತಾಸಕ್ತಿ ರಕ್ಷಣೆಯ ಸದುದ್ದೇಶವಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

ರವಿವಾರ ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ವಕ್ಫ್ ವಿಚಾರದಲ್ಲಿ ರೈತರಿಗೆ ನೀಡಲಾಗಿರುವ ನೋಟಿಸ್‍ಗಳನ್ನು ತಕ್ಷಣದಿಂದಲೇ ವಾಪಸ್ ಪಡೆಯಬೇಕು. ರೈತರ ಪಹಣಿ ಬದಲಾವಣೆ ಸಂಬಂಧ ಈಗಾಗಲೇ ನೀಡಿರುವ ನೋಟೀಸ್‍ಗಳನ್ನು ತಕ್ಷಣ ವಾಪಸ್ ಪಡೆಯಬೇಕು. ಕಾನೂನು ಬಾಹಿರವಾಗಿ ಹಾಗೂ ನೋಟೀಸ್ ನೀಡದೆ ಪಹಣಿಯಲ್ಲಿ ಯಾವುದೇ ರೀತಿಯ ತಿದ್ದುಪಡಿಗಳನ್ನು ಮಾಡಿದ್ದರೆ ತಕ್ಷಣ ರದ್ದು ಮಾಡಬೇಕು ಎಂದು ಸೂಚನೆ ನೀಡಿದ್ದೇನೆ. ಈ ಸೂಚನೆಯ ನಂತರವೂ ಬಿಜೆಪಿ ನಾಯಕರು ಯಾವ ಕಾರಣಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಸ್ಲಿಮ್ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತಾ ‘ವಕ್ಫ್ ಆಸ್ತಿ ಅಲ್ಲಾಹುಗೆ ಸೇರಿದ್ದು, ಆ ಆಸ್ತಿಯನ್ನು ಹಲವರು ಕಬಳಿಸಿದ್ದಾರೆ, ಅದನ್ನು ಒಂದೊಂದು ಇಂಚು ಬಿಡದೆ ವಾಪಸು ಪಡೆಯಬೇಕು, ಇಲ್ಲದೆ ಇದ್ದರೆ ಅಲ್ಲಾಹುವಿನ ದೃಷ್ಟಿಯಲ್ಲಿ ನೀವು ತಪ್ಪಿತಸ್ಥರಾಗುತ್ತಿರಿ’ ಎಂದು ಹೇಳಿರುವ ವೀಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ, ಇದು ಬಿಜೆಪಿ ನಾಯಕರ ಅತ್ಮವಂಚನೆಯ ನಡವಳಿಕೆಯನ್ನು ಬಯಲು ಮಾಡಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ಸರಣಿ ಪಟಾಕಿಗಳಂತೆ ಪ್ರತಿನಿತ್ಯ ಭಿನ್ನಮತ ಸ್ಪೋಟಗೊಳ್ಳುತ್ತಿದೆ. ಪರಸ್ಪರ ಆರೋಪಗಳನ್ನು ಮಾಡುವ ಮೂಲಕ ಬಿಜೆಪಿ ನಾಯಕರು ರಾಜ್ಯದ ಜನರ ಎದುರು ಬೆತ್ತಲಾಗುತ್ತಿದ್ದಾರೆ. ಈ ಜಗಳ ಬಗೆಹರಿಸುವ ಯಾವ ಪ್ರಯತ್ನವನ್ನೂ ಮಾಡದ ಅವರ ಪಕ್ಷದ ಹೈಕಮಾಂಡ್ ದೂರ ನಿಂತು ಚಂದ ನೋಡುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಎಲ್ಲ ಜಾತಿ ಮತ್ತು ಧರ್ಮದಲ್ಲಿರುವ ಬಡವರು, ರೈತರು, ಮಹಿಳೆಯರು, ಕಾರ್ಮಿಕರು ಫಲಾನುಭವಿಗಳಾಗಿರುವ ನಮ್ಮ ಗ್ಯಾರಂಟಿ ಯೋಜನೆಗಳು ಬಿಜೆಪಿ ನಾಯಕರ ನಿದ್ದೆಗೆಡಿಸಿದೆ. ತೆರಿಗೆ ಹಂಚಿಕೆ, ಜಿಎಸ್‍ಟಿ ಪರಿಹಾರ ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳ ಅನುದಾನದಲ್ಲಿ ಕಡಿತ ಮಾಡಿ ರಾಜ್ಯವನ್ನು ಆರ್ಥಿಕ ಮುಗ್ಗಟ್ಟಿಗೆ ಸಿಕ್ಕಿಸಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವಂತೆ ಮಾಡಬೇಕೆನ್ನುವುದು ಬಿಜೆಪಿಯ ಹುನ್ನಾರವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು ರಾಜ್ಯದ ಸಣ್ಣಪುಟ್ಟ ನಾಯಕರ ವರೆಗೆ ಎಲ್ಲರೂ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಕೇಂದ್ರ ಸರಕಾರದಿಂದ ನ್ಯಾಯಬದ್ಧವಾಗಿ ನಮಗೆ ಸಿಗಬೇಕಾಗಿರುವ ತೆರಿಗೆ ಹಂಚಿಕೆಯಲ್ಲಿನ ಪಾಲು ಮತ್ತು ಅನುದಾನ ನೀಡದೆ ಅನ್ಯಾಯ ಮಾಡುತ್ತಿದೆ. ಇಂತಹ ಬೆದರಿಕೆ ಮತ್ತು ಒತ್ತಡದ ತಂತ್ರಕ್ಕೆ ನಾವು ಬಗ್ಗುವುದೂ ಇಲ್ಲ, ಜಗ್ಗುವುದೂ ಇಲ್ಲ. ನುಡಿದಂತೆ ನಡೆಯುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಸುಳ್ಳು ಪ್ರೊಪಗಾಂಡದ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಕೋಮು ಸಂಘರ್ಷವನ್ನು ಸೃಷ್ಟಿ ಮಾಡಿ ಅದರಿಂದ ರಾಜಕೀಯ ಲಾಭ ಪಡೆಯುವುದು ಬಿಜೆಪಿಯ ಹುಟ್ಟು ಗುಣವಾಗಿದೆ. ಇದರ ಹೊರತಾಗಿ ಬಿಜೆಪಿ ಪಕ್ಷದ ಪ್ರತಿಭಟನೆಯಲ್ಲಿ ಯಾವ ರೈತರ ಹಿತಾಸಕ್ತಿಯ ರಕ್ಷಣೆಯ ಸದುದ್ದೇಶ ಇಲ್ಲ. ಈ ಪ್ರತಿಭಟನೆಯಿಂದ ರಾಜ್ಯದ ಸೌಹಾರ್ದತೆಗೆ ಭಂಗ ಉಂಟಾಗಬಹುದೇ ಹೊರತು ರೈತರಿಗೆ ಯಾವ ಲಾಭವೂ ಇಲ್ಲ ಎನ್ನುವುದನ್ನು ಜನತೆ ಅರ್ಥಮಾಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಬಿಜೆಪಿಗರಿಗೆ ಹೈಕಮಾಂಡಿನಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ: ರಾಜ್ಯದ ಬಿಜೆಪಿ ನಾಯಕರಿಗೆ ಹೈಕಮಾಂಡಿನಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲದ ಹಾಗಿದೆ. ಈ ಮುಜುಗರದಿಂದ ತಪ್ಪಿಸಿಕೊಳ್ಳಲು ಬಿಜೆಪಿ ನಾಯಕರು ದಿನಕ್ಕೊಂದು ವಿವಾದಗಳನ್ನು ಸೃಷ್ಟಿಸಿ ಜನರ ಗಮನ ಬೇರೆ ಕಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

VS NEWS DESK
Author: VS NEWS DESK

pradeep blr

ಬಿಸಿ ಬಿಸಿ ಸುದ್ದಿ

ಕ್ರಿಕೆಟ್ ಲೈವ್ ಸ್ಕೋರ್

ಚಿನ್ನ ಮತ್ತು ಬೆಳ್ಳಿ ಬೆಲೆಗಳು