ರಾಜ್ಯ ಬಿಜೆಪಿಯು ಇಂದು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ. ರೈತರಿಗೆ ವಕ್ಫ್ ಬೋರ್ಡ್ ನೀಡಿರುವ ನೋಟಿಸ್ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಇಂದು ಬೀದಿಗಿಳಿಯಲಿದ್ದಾರೆ. ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ.
ಮೊದಲಿಗೆ ವಿಜಯಪುರ ಜಿಲ್ಲೆಯ ಹಲವು ರೈತರಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡಿದ್ದು, ಅದರಲ್ಲಿ ರೈತರ ಜಮೀನು ವಕ್ಫ್‌ಗೆ ಸೇರಿದ್ದು ಎಂದು ಹೇಳಲಾಗಿತ್ತು. ಈ ವಿಚಾರವಾಗಿ ಬಿಜೆಪಿ ನಾಯಕರು ಸಿಡಿದೆದ್ದಿದ್ದರು. ಬಳಿಕ ರಾಜ್ಯ ಸರ್ಕಾರ ಅಂತಹ ಯಾವುದೇ ನೋಟಿಸ್ ಕೊಟ್ಟಿಲ್ಲ, ಕೊಟ್ಟಿದ್ದರೆ ಹಿಂಪಡೆಯುವುದಾಗಿ ಯೂಟರ್ನ್ ಕೂಡ ಹೊಡೆದಿತ್ತು.
ವಕ್ಫ್ ಮೂಲಕ ಕಾಂಗ್ರೆಸ್ ಸರ್ಕಾರದಿಂದ ಲ್ಯಾಂಡ್ ಜಿಹಾದ್ ಮಾಡುತ್ತಿದೆ ಎಂದು ಆರ್.ಅಶೋಕ್ ಆರೋಪ ಮಾಡಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ರೈತರಿಗೆ ಸೇರಿದ 15,000 ಎಕರೆ ಕೃಷಿ ಭೂಮಿಯನ್ನು ವಕ್ಫ್ ಹೆಸರಿನಲ್ಲಿ ಕಬಳಿಸಲು ಬಹು ದೊಡ್ಡ ಸಂಚು ನಡೆಯುತ್ತಿದೆ. ಈವರೆಗೂ ಮುಖ್ಯಮಂತ್ರಿ ರೈತರ ಪರವಾಗಿ ಮಾತನಾಡಿ ಆಶ್ವಾಸನೆ ಕೊಡುವುದಿರಲಿ, ಅದರ ಬಗ್ಗೆ ಚಕಾರ ಕೂಡಾ ಎತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ವಕ್ಫ್ ಆಸ್ತಿ ಎಂಬುದು ಒಂದು ರೀತಿ ಲ್ಯಾಂಡ್ ಜಿಹಾದ್ ಇದ್ದ ಹಾಗೆ. ಕಾಂಗ್ರೆಸ್ ಪಕ್ಷ ತನ್ನ ತುಷ್ಟೀಕರಣ ರಾಜಕಾರಣಕ್ಕೆ, ವೋಟ್ ಬ್ಯಾಂಕ್ ರಾಜಕೀಯಕ್ಕೆ ರೈತರ ಕೃಷಿ ಭೂಮಿ ಮಾತ್ರವಲ್ಲ ಮುಂದೊಂದು ದಿನ ಇಡೀ ರಾಜ್ಯವನ್ನೇ ವಕ್ಫ್ ಹೆಸರಿನಲ್ಲಿ ಮುಸ್ಲಿಮರಿಗೆ ಬಳುವಳಿ ಕೊಟ್ಟರೂ ಅಚ್ಚರಿಯಿಲ್ಲ ಎಂದು ಹೇಳಿದ್ದಾರೆ.
ವಕ್ಫ್ ಬೋರ್ಡ್ ಹೆಸರಿನಲ್ಲಿ ರೈತರ ಭೂಮಿ ಕಬಳಿಸಲು ನೋಟಿಸ್ ಕಳುಹಿಸಿದ್ದಾಯ್ತು, ಈಗ ಮಠ ಮಾನ್ಯಗಳ ಭೂಮಿಯ ಮೇಲೆ ರಾಜ್ಯ ಸರ್ಕಾರದ ವಕ್ರದೃಷ್ಟಿ ಬಿದ್ದಿದೆ. ಹಿಂದೂಗಳು ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ವಕ್ಫ್ ಹೆಸರಿನಲ್ಲಿ ಲ್ಯಾಂಡ್ ಜಿಹಾದ್ ಮಾಡಿ ಕರ್ನಾಟಕವನ್ನ ಮತ್ತೊಂದು ಪಾಕಿಸ್ತಾನ ಮಾಡಲೂ ಹೇಸುವುದಿಲ್ಲ ಈ ಕಾಂಗ್ರೆಸ್ ನಾಯಕರು ಮತ್ತು ಅವರ ಬ್ರದರ್ಸ್ ಎಂದು ದೂರಿದ್ದಾರೆ.
ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ! ಎಂದು ಜಗತ್ತಿಗೆ ಪಾಠ ಹೇಳಿದ ಅಣ್ಣ ಬಸವಣ್ಣನಿಗೆ ಜನ್ಮವಿತ್ತ ಪುಣ್ಯ ಭೂಮಿ ಕಲ್ಯಾಣ ಕರ್ನಾಟಕದಲ್ಲಿ ವಕ್ಫ್ ಮಂಡಳಿ ಹೆಸರಿನಲ್ಲಿ ಕಳ್ಳತನ, ಸುಳ್ಳು, ಸುಲಿಗೆ ನಡೆಯುತ್ತಿರುವುದು ಖೇದಕರ ಸಂಗತಿ. ಇಡೀ ಪ್ರಪಂಚಕ್ಕೆ ವಚನಾಮೃತ ಉಣಬಡಿಸಿದ ಕಲ್ಯಾಣ ನಾಡಿನಲ್ಲಿ ವಕ್ಫ್ ಹೆಸರಿನಲ್ಲಿ ಲ್ಯಾಂಡ್ ಜಿಹಾದ್ ವಿಷ ಬೀಜ ಬಿತ್ತುತ್ತಿರುವ ಕಾಂಗ್ರೆಸ್ ಸರ್ವನಾಶ ಆಗುವುದರಲ್ಲಿ ಯಾವ ಸಂಶಯವೂ ಇಲ್ಲ ಎಂದು ಹಿಡಿಶಾಪ ಹಾಕಿದ್ದಾರೆ.
ಹಿಂದೂಗಳೆಂದರೆ ಸಿದ್ದರಾಮಯ್ಯ ಸರ್ಕಾರಕ್ಕೆ ಯಾಕಿಷ್ಟು ದ್ವೇಷ? ವಕ್ಫ್ ಬೋರ್ಡ್‌ಗೆ ಬೇಕಾದರೆ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಸ್ತಿ ಬರೆಸಿಕೊಡಿ, ನಿಮ್ಮದೂ ಕೊಡಿ, ನಿಮ್ಮ ಸಚಿವರು, ಶಾಸಕರದ್ದೂ ಕೊಡಿಸಿಬಿಡಿ. ಆದರೆ ಜನ ಸಾಮಾನ್ಯರ ಮೇಲೆ ಯಾಕಿಷ್ಟು ದಬ್ಬಾಳಿಕೆ ಮಾಡುತ್ತಿದ್ದೀರ? ಬ್ರದರ್ಸ್ ಮೇಲಿರುವ ಪ್ರೀತಿಗೆ ಹಿಂದೂಗಳಿಗೆ ಯಾಕೆ ತೊಂದರೆ ಕೊಡುತ್ತೀರ?ವಕ್ಫ್ ಮಂಡಳಿ ನೆಪದಲ್ಲಿ ಲ್ಯಾಂಡ್ ಜಿಹಾದ್‌ಗೆ ಕಾಂಗ್ರೆಸ್ ಸರ್ಕಾರದ ಸಂಪೂರ್ಣ ಸಹಕಾರ ಇರಲಿದೆ ಎಂದು ಮುಸ್ಲಿಮರಿಗೆ ಪ್ರತ್ಯೇಕವಾಗಿ ಆರನೇ ಗ್ಯಾರೆಂಟಿ ಏನಾದರೂ ಕೊಟ್ಟಿದ್ದೀರಾ? ಎಂದು ಲೇವಡಿ ಮಾಡಿದ್ದಾರೆ.
ನಾಡಿನ ಜನರಿಗೆ ಅನ್ನ ಕೊಡುವ ರೈತರ ಜಮೀನು ಕಬಳಿಸುವುದಕ್ಕೆ ಸಚಿವ ಜಮೀರ್ ಅಹಮದ್ ಖಾನ್ ಹಾಗೂ ವಕ್ಫ್ ಬೋರ್ಡ್ ಸಂಚು ರೂಪಿಸಿದೆ. ಸಿಎಂ ಸಿದ್ದರಾಮಯ್ಯನವರಿಗೆ ಮುಸಲ್ಮಾನರ ಭೂತ ಹಿಡಿದಿದೆ. ಅನ್ನದಾತರ ಜಮೀನು ಕಸಿಯುತ್ತಿರುವ ಕಾಂಗ್ರೆಸ್ ಸರ್ಕಾರದ ಅನ್ಯಾಯದ ವಿರುದ್ಧ ನವೆಂಬರ್ 4ರಂದು (ಇಂದು) ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಅಶೋಕ್ ಹೇಳಿದ್ದಾರೆ.