Search
Close this search box.

ಡಿಕೆ ಶಿವಕುಮಾರ್ ಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ರಿಲೀಫ್; ಸಿಬಿಐ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ

ನವದೆಹಲಿ: ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧದ ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಪ್ರಕರಣದ ತನಿಖೆಗೆ ಸಿಬಿಐಗೆ ನೀಡಿದ ಅನುಮತಿಯನ್ನು ರಾಜ್ಯ ಸರ್ಕಾರ ಹಿಂಪಡೆದಿರುವುದನ್ನು ಪ್ರಶ್ನಿಸಿ ಕೇಂದ್ರೀಯ ತನಿಖಾ ದಳ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ನಾಲ್ಕು ವಾರಗಳ ಕಾಲ ಮುಂದೂಡಿದೆ.

ಕರ್ನಾಟಕ ಹೈಕೋರ್ಟ್ ಆದೇಶದ ವಿರುದ್ಧ ಸಿಬಿಐ ಮೇಲ್ಮನವಿ ಸಲ್ಲಿಸಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ ನಂತರ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ಪ್ರಕರಣವನ್ನು ಮುಂದೂಡಿತು.

ಸಿಬಿಐ ತನಿಖೆಗೆ ನೀಡಿದ ಅನುಮತಿಯನ್ನು ಹಿಂಪಡೆಯುವ ವಿರುದ್ಧ ಅರ್ಜಿಯನ್ನು ತಿರಸ್ಕರಿಸಿ ಕರ್ನಾಟಕ ಹೈಕೋರ್ಟ್ ಆಗಸ್ಟ್ 29 ರಂದು ನೀಡಿದ ಆದೇಶದ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯಾತ್ನಾಳ್ ಸಲ್ಲಿಸಿರುವ ಅರ್ಜಿಯನ್ನು ಕೂಡಾ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.

ಸಿಬಿಐ ಮೇಲ್ಮನವಿಯನ್ನು ಇನ್ನೂ ವಿಚಾರಣೆಗೆ ಪಟ್ಟಿ ಮಾಡಿಲ್ಲ ಎಂದು ಮೆಹ್ತಾ ನ್ಯಾ ಪೀಠಕ್ಕೆ ತಿಳಿಸಿದರು. ಆದರೆ ಶಿವಕುಮಾರ್ ಪರವಾಗಿ ವಾದಿಸಿದ ಹಿರಿಯ ವಕೀಲ ರಂಜಿತ್ ಕುಮಾರ್, ಈ ವಿಷಯದಲ್ಲಿ ಉತ್ತರವನ್ನು ಸಲ್ಲಿಸಲು ಸಮಯ ಕೋರಿದರು. ಶಿವಕುಮಾರ್ ಮತ್ತು ರಾಜ್ಯ ಸರ್ಕಾರದ ಮನವಿಯ ಮೇರೆಗೆ ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 17 ರಂದು ನೋಟಿಸ್ ಜಾರಿ ಮಾಡಿತ್ತು.

ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ (ಡಿಎ) ಪ್ರಕರಣದ ತನಿಖೆಗೆ ಏಜೆನ್ಸಿಗೆ ಒಪ್ಪಿಗೆಯನ್ನು ಹಿಂತೆಗೆದುಕೊಳ್ಳುವ ಕರ್ನಾಟಕ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಿಬಿಐ ಸಲ್ಸಿಸಿದ ಅರ್ಜಿಯನ್ನು ಆಗಸ್ಟ್ 29 ರಂದು ಹೈಕೋರ್ಟ್ ವಜಾಗೊಳಿಸಿತ್ತು.

74.93 ಕೋಟಿ ಅಕ್ರಮ ಆಸ್ತಿ ಸಂಪಾದನೆ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ಉಲ್ಲೇಖಿಸಿ ರಾಜ್ಯ ಸರ್ಕಾರ ನವೆಂಬರ್ 23, 2023 ರಂದು ನೀಡಿದ್ದ ಆದೇಶ ಪ್ರಶ್ನಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತ್ತು.

DCM DK Shivakumar
ಶಿವಕುಮಾರ್ ಅವರು 2013 ಮತ್ತು 2018 ರ ನಡುವೆ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದಾಗ ಆದಾಯಕ್ಕೂ ಮೀರಿ ಆಸ್ತಿಯನ್ನು ಗಳಿಸಿದ್ದಾರೆ ಎಂದು ಸಿಬಿಐ ಆರೋಪಿಸಿದೆ. ಬಿಜೆಪಿ ಅಧಿಕಾರಕ್ಕೆ ಬಂದಾಗ ಶಿವಕುಮಾರ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಿಬಿಐಗೆ ಸರ್ಕಾರ ಅನುಮತಿ ನೀಡಿತ್ತು. ಸಿದ್ದರಾಮಯ್ಯ ನೇತೃತ್ವದ ಪ್ರಸ್ತುತದ ಸರ್ಕಾರ, ನವೆಂಬರ್ 23, 2023 ರಂದು, ಶಿವಕುಮಾರ್ ವಿರುದ್ಧದ ಪ್ರಕರಣದ ತನಿಖೆಗೆ ಸಿಬಿಐಗೆ ನೀಡಿದ್ದ ಅನುಮತಿಯನ್ನು ಅಕ್ರಮವೆಂದು ಪರಿಗಣಿಸಿ ಅದನ್ನು ಹಿಂಪಡೆಯಲು ನಿರ್ಧರಿಸಿತು.
VS NEWS DESK
Author: VS NEWS DESK

pradeep blr

ಬಿಸಿ ಬಿಸಿ ಸುದ್ದಿ

ಕ್ರಿಕೆಟ್ ಲೈವ್ ಸ್ಕೋರ್

ಚಿನ್ನ ಮತ್ತು ಬೆಳ್ಳಿ ಬೆಲೆಗಳು