ಕರ್ನಾಟಕದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಗಂಭೀರ ಆರೋಪ ಮಾಡಿದ್ದ ಐಪಿಎಸ್ ಅಧಿಕಾರಿ ಡಿ.ರೂಪಾ ಅವರ ನಡುವಿನ ಜಗಳ ಲೋಕಲ್ ಕೋರ್ಟ್, ಹೈಕೋರ್ಟ್ ಮುಗಿದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಆದ್ರೆ, ಸುಪ್ರೀಂಕೋರ್ಟ್ನಲ್ಲೂ ಸಹ ಈ ಇಬ್ಬರು ಅಧಿಕಾರಿಗಳ ಜಗಳ ಬಗೆಹರಿದಿಲ್ಲ. ನ್ಯಾಯಾಧೀಶರ ಮನವಿಗೂ ಬಗ್ಗದ ಅಧಿಕಾರಿಗಳು, ನಾನಾಗಿಯೇ ಸೋಲುವುದಿಲ್ಲ ಎಂದು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಹಾಗಾದ್ರೆ, ಕೋರ್ಟ್‌ನಲ್ಲಿ ಏನೆಲ್ಲಾ ಆಯ್ತು? ಇದಕ್ಕೆ ಜಡ್ಜ್ ಹೇಳಿದ್ದೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಸುಪ್ರೀಂ ಕೋರ್ಟ್‌ನಲ್ಲಿ ನಡೆದಿದ್ದೇನು?
ಸುಪ್ರೀಂ ಕೋರ್ಟ್‌ನಲ್ಲಿ ಐಪಿಎಸ್ ಡಿ.ರೂಪಾ Vs ಐಎಎಸ್ ರೋಹಿಣಿ ಸಿಂಧೂರಿ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿ ಅಭಯ್ ಓಕಾ ಅವರು ಕೈಗೆತ್ತಿಕೊಂಡರು. ವಿಚಾರಣೆ ವೇಳೆ ಮಧ್ಯಸ್ಥಿಕೆ ಮೂಲಕ ಪ್ರಕರಣ ಇತ್ಯರ್ಥ ಮಾಡಿಕೊಳ್ಳುವುದಾಗಿ ದೂರುದಾರೆ ಡಿ. ರೂಪಾ ಪರ ವಕೀಲರು ಕೋರ್ಟ್ ಮುಂದೆ ಒಲವು ವ್ಯಕ್ತಪಡಿಸಿದರು. ಅಲ್ಲದೇ ಪ್ರಕರಣ ಇತ್ಯರ್ಥಕ್ಕೆ ಮಧ್ಯವರ್ತಿ ಗಳ ನೇಮಕಕ್ಕೆ ಮನವಿ ಮಾಡಿದರು. ಆದರೆ ಮಧ್ಯಸ್ಥಿಗೆ ಒಪ್ಪದ ರೋಹಿಣಿ ಸಿಂಧೂರಿ, ಕೋರ್ಟ್ ನಲ್ಲಿಯೇ ತೀರ್ಮಾನವಾಗಲಿ ಎಂದು ಪಟ್ಟು ಹಿಡಿದರು. ಇದಕ್ಕೆ ಕೋರ್ಟ್, ಉನ್ನತ ಅಧಿಕಾರಿಗಳು ಹೀಗೆ ಕಿತ್ತಾಡುವುದು ಆರೋಗ್ಯಕರವಲ್ಲ. ಮಧ್ಯಸ್ಥಿಕೆ ಒಪ್ಪದೆ ಇದ್ರೆ ನಾವು ಏನೂ ಮಾಡಲು ಸಾಧ್ಯವಿಲ್ಲ. ಪ್ರಕರಣದ ಅರ್ಹತೆ ಮೇಲೆ ನಾವು ನಿರ್ಧರಿಸಬೇಕಾಗುತ್ತೆ. ಇಬ್ಬರೂ ನ್ಯಾಯಾಲಯದಲ್ಲಿದ್ದಾರೆ. ದಯವಿಟ್ಟು ಏನು ಮಾಡಬೇಕೆಂದು ನಿಲುವು ತೆಗೆದುಕೊಳ್ಳಿ. ಅವರು ಪರಸ್ಪರ ಮುಖಾಮುಖಿಯಾಗಿ ಮಾತನಾಡಬಹುದೇ? ಅಥವಾ ಹಿರಿಯ ವಕೀಲರು ಅಥವಾ ನಿವೃತ್ತ ನ್ಯಾಯಾಧೀಶರ ಸಮ್ಮುಖದಲ್ಲಿ ಪರಸ್ಪರ ರಾಜೀ ಸಂಧಾನ ಮಾಡಬಹುದೇ ಎಂದು ಪ್ರಸ್ತಾಪ ಮಾಡಿತು. ಇದಕ್ಕೆ ಡಿ ರೂಪ ಒಪ್ಪಿದರು.
ಬೇಷರತ್ ಕ್ಷಮೆಗೆ ಪಟ್ಟು ಹಿಡಿದ ರೋಹಿಣಿ
ಕೆಲ ಹೊತ್ತಿನ ಬಳಿಕ ಡಿ.ರೂಪಾ ಮಾತುಕತೆ ವಿಫಲವಾಯಿತು ಎಂದು ಕೋರ್ಟ್ಗೆ ಹೇಳಿದರು. ಇದಕ್ಕೆ ಕಾರಣ ಏನು ಎಂದು ನ್ಯಾಯಧೀಶರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ರೂಪಾ ನಾನು ರೋಹಿಣಿ ಸಿಂಧೂರಿಗೆ ಅವರಿಗೆ ಬೇಷರತ್ ಕ್ಷಮೆಯಾಚಿಸಬೇಕಂತೆ ಎಂದರು. ಒಳ್ಳೆಯದೇ ಅಲ್ಲವೇ? ಕ್ಷಮೆ ಕೇಳಿ ಪ್ರಕರಣ ಬಗೆಹರಿಸಿಕೊಳ್ಳಿ. ಇಲ್ಲದೇ ಕಾನೂನು ಪ್ರಕಾರ ಹೋದರೆ ಇಬ್ಬರೂ ಕಷ್ಟವಾಗುತ್ತದೆ ಎಂದು ಕೋರ್ಟ್ ಹೇಳಿತು. ಇದಕ್ಕೆ ಒಪ್ಪದ ಡಿ.ರೂಪ, ಪರಸ್ಪರ ಕ್ಷಮೆ ಅಗತ್ಯವಿದೆ ಎಂದರು.
ಸಿಂಧೂರಿ ಆರೋಪವೇನು?
ನನ್ನ ವಿರುದ್ಧ ಡಿ.ರೂಪಾ ಮೌದ್ಗಿಲ್ 2023ರ ಫೆ.18 ಮತ್ತು 19ರಂದು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಕೀಳು ಅಭಿರುಚಿಯಿಂದ ಕೂಡಿದ ಆರೋಪ ಮಾಡಿದ್ದಾರೆ. ವಿದ್ಯುನ್ಮಾನ ಮಾಧ್ಯಮಗಳಲ್ಲೂ ಹೇಳಿಕೆ ನೀಡಿದ್ದಾರೆ. ಆ ಆರೋಪಗಳು ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ಉಂಟು ಮಾಡುವಂತಿವೆ. ನನ್ನ ತೇಜೋವಧೆ ಮಾಡುವ ದುರದ್ದೇಶದಿಂದಲೇ ರೂಪ ಈ ಕೃತ್ಯ ಎಸಗಲಾಗಿದೆ. ಇದು ನನ್ನ ಖಾಸಗಿ, ಸಾಮಾಜಿಕ ಮತ್ತು ವೃತ್ತಿ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಮಾನಸಿಕ ಯಾತನೆ ಉಂಟು ಮಾಡಿದೆ ಎಂದು ಆರೋಪಿಸಿ ರೋಹಿಣಿ ಸಿಂಧೂರಿ ಮಾ.3ರಂದು ವಿಚಾರಣಾ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.
Author: VS NEWS DESK
pradeep blr