ಬೆಂಗಳೂರು: ರಾಜ್ಯ ಸರಕಾರವು ಪ್ರಸಕ್ತ ಆರ್ಥಿಕ ವರ್ಷ ತನ್ನ ಸ್ವಂತ ತೆರಿಗೆ ಹಾಗೂ ತೆರಿಗೆಯೇತರ ಮೂಲದಿಂದ 1.96 ಲಕ್ಷ ಕೋಟಿ ರೂ. ಸಂಗ್ರಹ ಗುರಿ ಹೊಂದಿದ್ದು, ಏಳು ತಿಂಗಳಲ್ಲಿ ಶೇ.53ರಷ್ಟು ಆದಾಯ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ. ಆದರೆ, ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಬದ್ಧತಾ ವೆಚ್ಚ, ಗ್ಯಾರಂಟಿಗಳ ಅನುಷ್ಠಾನದಿಂದ ಖರ್ಚಿನ ಬಾಬ್ತು ಹೆಚ್ಚಾಗುತ್ತಿದ್ದು, ಸಾಲದ ಹೊರೆಯೂ ವೃದ್ಧಿಸುತ್ತಿರುವುದು ಆತಂಕ ಮೂಡಿಸುವಂತಿದೆ.
ಸರಕಾರಿ ನೌಕರರ ವೇತನ, ಪಿಂಚಣಿ ಹಾಗೂ ಸರಕಾರ ಪಡೆದಿರುವ ಸಾಲಕ್ಕೆ ಪಾವತಿಸುವ ಬಡ್ಡಿ ಮೊತ್ತದಲ್ಲೇ 31,362 ಕೋಟಿ ರೂ. ಹೆಚ್ಚಳವಾಗಿದ್ದು, ಬದ್ಧತಾ ವೆಚ್ಚಕ್ಕೆ ಸರಕಾರ ಪ್ರಸಕ್ತ ವರ್ಷ ಬರೋಬ್ಬರಿ 1.52 ಲಕ್ಷ ಕೋಟಿ ರೂ. ವೆಚ್ಚ ಮಾಡಬೇಕಿದೆ. ಆರ್ಥಿಕ ವರ್ಷದ ಅಂತ್ಯಕ್ಕೆ ರಾಜ್ಯ ಸರಕಾರದ ಒಟ್ಟು ಸಾಲ ಮೊತ್ತವು 6.57 ಲಕ್ಷ ಕೋಟಿ ರೂ.ಗೆ ತಲುಪಲಿದೆ.
ರಾಜ್ಯದ ಆರ್ಥಿಕ ಪರಿಸ್ಥಿತಿ ಏನೇ ಇದ್ದರೂ ಆಯ್ದ ಬದ್ಧತಾ ವೆಚ್ಚಗಳಿಗೆ ಹಣ ಹೊಂದಿಸುವುದು ಅನಿವಾರ್ಯ. ಸರಕಾರಿ ನೌಕರರ ವೇತನ, ಪಿಂಚಣಿ ಹಾಗೂ ರಾಜ್ಯ ಸರಕಾರ ಪಡೆದಿರುವ ಸಾಲಗಳಿಗೆ ಬಡ್ಡಿಯನ್ನು ಆದ್ಯತೆ ಮೇರೆಗೆ ಪಾವತಿಸಬೇಕಾಗುತ್ತದೆ. ಹಾಗಾಗಿ ಇವುಗಳನ್ನು ಬದ್ಧತಾ ವೆಚ್ಚವೆಂದೇ ಪರಿಗಣಿಸಿ ಹಣ ಹೊಂದಿಸಲಾಗುತ್ತದೆ.
ವೇತನ, ಪಿಂಚಣಿ ವೆಚ್ಚ 22,670 ಕೋಟಿಗೆ ಏರಿಕೆ
ಪ್ರಸಕ್ತ ವರ್ಷದಲ್ಲಿ ಈ ಮೂರು ಬಾಬ್ತಿಗೆ 1,53,023 ಕೋಟಿ ರೂ. ವೆಚ್ಚವಾಗಲಿದೆ. ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ 2024-25ನೇ ಸಾಲಿನಲ್ಲಿ ಬದ್ಧತಾ ವೆಚ್ಚ ಹೆಚ್ಚಾಗಿದೆ. ರಾಜ್ಯ ಸರಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸಿನ ಅನುಷ್ಠಾನದ ಹಿನ್ನೆಲೆಯಲ್ಲಿ ವೇತನ ಹಾಗೂ ಪಿಂಚಣಿ ವೆಚ್ಚ ಬಾಬ್ತು ಹೆಚ್ಚಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷದಲ್ಲಿ ವೇತನ, ಪಿಂಚಣಿಗೆ ಹೆಚ್ಚುವರಿಯಾಗಿ ಸುಮಾರು 22,670 ಕೋಟಿ ರೂ. ಭರಿಸಬೇಕಿದೆ.
ಬಡ್ಡಿ ಪಾವತಿ ಮೊತ್ತವೂ ಹೆಚ್ಚಳ
ವರ್ಷದಿಂದ ವರ್ಷಕ್ಕೆ ರಾಜ್ಯ ಸರಕಾರದ ಸಾಲಿನ ಮೊತ್ತವೂ ಹೆಚ್ಚಾಗುತ್ತಿದೆ. ಕಳೆದ ವರ್ಷ ಸಾಲ ಮೊತ್ತದ ಬಡ್ಡಿ ಪಾವತಿಗೆ ಸರಕಾರ 30,543 ಕೋಟಿ ರೂ. ವೆಚ್ಚವಾಗಿತ್ತು. ಪ್ರಸಕ್ತ ವರ್ಷ ಸರಕಾರವು 1.05 ಲಕ್ಷ ಕೋಟಿ ರೂ. ಸಾಲ ಪಡೆಯಲು ತೀರ್ಮಾನಿಸಿದ್ದು, ಮುಂದಿನ ಮಾರ್ಚ್ 31ರೊಳಗೆ ಬಡ್ಡಿ ಪಾವತಿಗೆ 39,234 ಕೋಟಿ ರೂ. ಪಾವತಿಸಬೇಕಾಗಲಿದೆ. ಅಂದರೆ ಸಾಲ ಪಡೆಯಲಿರುವ ಮೊತ್ತದ ಶೇ.40ರಷ್ಟು ಹಣ ಬಡ್ಡಿ ಪಾವತಿಗೆ ಬಳಕೆಯಾಗಲಿದೆ ಎನ್ನಬಹುದು. ಒಟ್ಟಾರೆ ಬದ್ಧತಾ ವೆಚ್ಚಗಳಿಗೆ ಭರಿಸುವ ಮೊತ್ತದಲ್ಲಿ ಏಕಾಏಕಿ 31,362 ಕೋಟಿ ರೂ.ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಕೆಲವೊಂದು ವೆಚ್ಚ ಇಳಿಕೆ
ರಾಜ್ಯ ಸರಕಾರ ನಾನಾ ಕಲ್ಯಾಣ ಯೋಜನೆ, ಕಾರ್ಯಕ್ರಮಗಳಡಿ ನೀಡುವ ಸಹಾಯಧನ (ಸಬ್ಸಿಡಿ) ಮತ್ತು ಆರ್ಥಿಕ ನೆರವಿಗೆ ವಿನಿಯೋಗಿಸುವ ಮೊತ್ತದಲ್ಲಿ ತುಸು ಇಳಿಕೆಯಾಗುವ ಸಾಧ್ಯತೆ ಇದೆ. ಕಳೆದ ವರ್ಷ ಈ ಬಾಬ್ತಿಗೆ 27,732 ಕೋಟಿ ರೂ. ವೆಚ್ಚವಾಗಿದ್ದರೆ, ಪ್ರಸಕ್ತ ವರ್ಷದಲ್ಲಿ 25,904 ಕೋಟಿ ರೂ.ಗೆ ಇಳಿಕೆಯಾಗುವ ಅಂದಾಜಿದೆ. ಸಾಮಾಜಿಕ ಭದ್ರತಾ ಪಿಂಚಣಿಯು 10,822 ಕೋಟಿ ರೂ.ನಿಂದ ಪ್ರಸಕ್ತ ವರ್ಷದಲ್ಲಿ10,230 ಕೋಟಿ ರೂ. ಇಳಿಕೆಯಾಗುವ ಸಂಭವವಿದೆ.
ಗ್ಯಾರಂಟಿಗೆ ದೊಡ್ಡ ಮೊತ್ತ
ಪಂಚ ಗ್ಯಾರಂಟಿಗೆ ಪ್ರಸಕ್ತ ವರ್ಷ 52,009 ಕೋಟಿ ರೂ. ಕಾಯ್ದಿರಿಸಲಾಗಿದೆ. ಕಳೆದ ವರ್ಷ ಮೇನಲ್ಲಿ ಸರಕಾರ ರಚನೆಯಾಗಿ ಹಂತ ಹಂತವಾಗಿ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದ್ದರಿಂದ ಕಳೆದ ಬಾರಿ 33,468 ಕೋಟಿ ರೂ. ಮಾತ್ರ ವೆಚ್ಚವಾಗಿತ್ತು. ಈ ವರ್ಷ ಅಕ್ಟೋಬರ್ ಅಂತ್ಯದವರೆಗೆ ಗ್ಯಾರಂಟಿಗಳಿಗೆ 24,235 ಕೋಟಿ ರೂ.ಗಳನ್ನು ಸರಕಾರ ಬಿಡುಗಡೆ ಮಾಡಿದೆ.
ಹೆಚ್ಚುತ್ತಿರುವ ಋಣಭಾರ
ಹಿಂದಿನ 2023-24ನೇ ಸಾಲಿನ ಅಂತ್ಯಕ್ಕೆ ರಾಜ್ಯ ಸರಕಾರದ ಒಟ್ಟು ಸಾಲ ಮೊತ್ತ 5.67 ಲಕ್ಷ ಕೋಟಿ ರೂ. ತಲುಪಿತ್ತು. ಪ್ರಸಕ್ತ ವರ್ಷ ಸರಕಾರ 1.05 ಲಕ್ಷ ಕೋಟಿ ರೂ. ಹೊಸದಾಗಿ ಸಾಲ ಪಡೆಯಲು ಮುಂದಾಗಿದ್ದು, ಮಾರ್ಚ್ ಅಂತ್ಯಕ್ಕೆ ಒಟ್ಟು ಸಾಲ ಮೊತ್ತ 6.57 ಲಕ್ಷ ಕೋಟಿ ರೂ.ಗೆ ಹೆಚ್ಚಳವಾಗುವ ಸಂಭವವಿದೆ. ಹಾಗಾಗಿ 2025-26ನೇ ಸಾಲಿನಲ್ಲಿಸಾಲದ ಮೇಲಿನ ಬಡ್ಡಿ ಪಾವತಿಗೆಂದೇ ವರ್ಷಕ್ಕೆ 45,771 ಕೋಟಿ ರೂ. ಮೀರುವ ಅಂದಾಜಿದೆ.
ವೆಚ್ಚದ ಬಾಬ್ತು (ಕೋಟಿ ರೂಗಳಲ್ಲಿ)
ಉದ್ದೇಶ 2023-24 2024-25
ವೇತನ 65003 80434
ಪಿಂಚಣಿ 25116 32355
ಬಡ್ಡಿ ಪಾವತಿ 30543 39234
ಸಹಾಯಧನ (ಸಬ್ಸಿಡಿ)- ಆರ್ಥಿಕ ನೆರವು 27732 25904
ಗ್ಯಾರಂಟಿ 33468 52009
ಸಾಮಾಜಿಕ ಭದ್ರತಾ ಪಿಂಚಣಿ 10822 10230
ಒಟ್ಟು ಸಾಲ
2023-24ನೇ ಸಾಲಿಗೆ ಬಾಕಿಯಿದ್ದ ಒಟ್ಟು ಸಾಲ- 5,67,751 ಕೋಟಿ ರೂ.
2024-25ನೇ ಸಾಲಿಗೆ ಬಾಕಿ ಸಾಲ (2025ರ ಮಾರ್ಚ್ 31ರ ಹೊತ್ತಿಗೆ) ಅಂದಾಜು- 6,57,588 ಕೋಟಿ ರೂ.
ಪ್ರಸಕ್ತ ವರ್ಷದಲ್ಲಿ ಪಡೆಯುವ ಸಾಲ- 1,05,246 ಕೋಟಿ ರೂ.
Author: VS NEWS DESK
pradeep blr