ಕೋವಿಡ್‌ ಅಕ್ರಮ: ಶ್ರೀರಾಮುಲು ಭ್ರಷ್ಟಾಚಾರ ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ

ಬಳ್ಳಾರಿ, ನವೆಂಬರ್‌ 09: ಬಿಜೆಪಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಮತ್ತು ಆರೋಗ್ಯ ಮಂತ್ರಿ ಶ್ರೀರಾಮುಲು ಇಬ್ಬರೂ ಕೋವಿಡ್ ಸಂದರ್ಭದಲ್ಲಿ ಚೀನಾದಿಂದ ಪಿಪಿಇ ಕಿಟ್ ತರಿಸಿ ಭ್ರಷ್ಟಾಚಾರ ನಡೆಸಿದ್ದಾರೆ. ಇವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ನ್ಯಾ.ಮೈಕೆಲ್ ಕುನ್ಹಾ ಅವರ ತನಿಖಾ ಆಯೋಗ ಪತ್ತೆ ಹಚ್ಚಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದೆ.

ಸಂಡೂರು ವಿಧಾನಸಭಾ ಕ್ಷೇತ್ರದ ಮೆಟ್ರಿಕಿ ಗ್ರಾಮದಲ್ಲಿ ಬೃಹತ್ ಜನಸಮಾವೇಶವದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕೋವಿಡ್ ಸಂದರ್ಭದಲ್ಲಿ ಇಡೀ ರಾಜ್ಯದ ಜನತೆ ಭಯ, ಆತಂಕದಲ್ಲಿ ದೇವರ ಪ್ರಾರ್ಥನೆ ಮಾಡುತ್ತಿದ್ದಾಗ ಬಿಜೆಪಿ ಸರ್ಕಾರ ಮತ್ತು ಸಚಿವ ಶ್ರೀರಾಮುಲು ಅವರು ಹಣ ಲೂಟಿ ಮಾಡುವುದರಲ್ಲಿ ಮುಳುಗಿದ್ದರು. ನಮ್ಮ ಜನರ ಮೃತದೇಹಗಳ ಹೆಸರಲ್ಲೂ ಭ್ರಷ್ಟಚಾರ ನಡೆಸಿದ ಬಿಜೆಪಿ ಯವರನ್ನು ಯಾವ ದೇವರೂ ಕ್ಷಮಿಸಲ್ಲ. ನೀವೂ ಕ್ಷಮಿಸಬೇಡಿ ಎಂದು ಜನರಿಗೆ ಕರೆ ನೀಡಿದರು.

ಬಿಜೆಪಿ ಶ್ರೀಮಂತರ ಮತ್ತು ಮೇಲ್ವರ್ಗದವರ ಪಕ್ಷ. ಕಾಂಗ್ರೆಸ್ ಜಾರಿ ಮಾಡುವ ಎಲ್ಲಾ ಬಡವರ ಪರವಾದ ಕಾರ್ಯಕ್ರಮಗಳನ್ನು ವಿರೋಧಿಸುತ್ತದೆ. ಅಪಪ್ರಚಾರ ಮಾಡುತ್ತದೆ. ಆಗ ಇಂದಿರಾಗಾಂಧಿಯವರ 20 ಅಂಶಗಳ ಕಾರ್ಯಕ್ರಮಗಳನ್ನು ಬಿಜೆಪಿ ವಿರೋಧಿಸಿ ಅಪಪ್ರಚಾರ ಮಾಡಿತ್ತು. ಈಗ ನಮ್ಮ‌ ಸರ್ಕಾರದ ಐದು ಗ್ಯಾರಂಟಿಗಳನ್ನು ವಿರೋಧಿಸಿ ಅಪಪ್ರಚಾರ ಮಾಡುತ್ತಿದೆ. ಇದೇ ಬಿಜೆಪಿಯ ಜಾಯಮಾನ ಎಂದು ಟೀಕಿಸಿದರು.

ಬಿಜೆಪಿ ರೈತರು, ಕಾರ್ಮಿಕರು, ಮಹಿಳೆಯರು, ಯುವಕರು, ವಿದ್ಯಾರ್ಥಿಗಳು, ದಲಿತರು, ಹಿಂದುಳಿದವರ ಪರವಾಗಿ ಒಂದೇ ಒಂದು ಕಾರ್ಯಕ್ರಮ ಕೊಟ್ಟಿದ್ದರೆ ನೆನಪಿಸಿಕೊಂಡು ಹೇಳಿ ನೋಡೋಣ. ಯಾವ ಕಾರ್ಯಕ್ರಮವನ್ನೂ ಕೊಟ್ಟಿಲ್ಲ. ಅದಕ್ಕೇ ನಿಮಗೆ ನೆನಪಾಗ್ತಿಲ್ಲ. ಸಂಡೂರಿನಲ್ಲಿರುವ ರಸ್ತೆ, ಶಾಲೆ, ವಸತಿ ಶಾಲೆ, ಅಂಗನವಾಡಿ, ಆಸ್ಪತ್ರೆ, ನೀರು, ನೀರಾವರಿ ಎಲ್ಲವೂ ಆಗಿರುವುದು ಸಂತೋಷ್ ಲಾಡ್ ಮತ್ತು ತುಕಾರಾಮ್ ಅವರ ಅವಧಿಯಲ್ಲಿ. ಬಿಜೆಪಿಯವರು ಕೇವಲ ಸುಳ್ಳು ಹೇಳಿಕೊಂಡು, ಜನರ ನಡುವೆ ದ್ವೇಷ ಬಿತ್ತುತ್ತಾ ರಾಜಕಾರಣ ಮಾಡುತ್ತಿದ್ದಾರೆ ಎಂದರು.

ಬಿಜೆಪಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಮತ್ತು ಆರೋಗ್ಯ ಮಂತ್ರಿ ಶ್ರೀರಾಮುಲು ಚೀನಾದಿಂದ ಪಿಪಿಇ ಕಿಟ್ ತರಿಸಿ ಭ್ರಷ್ಟಾಚಾರ ನಡೆಸಿದ್ದಾರೆ. ಇವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಿ ಎಂದು ನ್ಯಾ.ಕುನ್ಹಾ ಅವರ ತನಿಖಾ ಆಯೋಗ ಪತ್ತೆ ಹಚ್ಚಿದೆ. ಹಿಂದೆ ಜನಾರ್ದನರೆಡ್ಡಿಯವರ ಟೀಮು ನಡೆಸಿದ್ದ ಭ್ರಷ್ಟಾಚಾರವನ್ನು ಲೋಕಾಯುಕ್ತ ಸಂತೋಷ್ ಹೆಗ್ಡೆಯವರು ಬಯಲಿಗೆ ಎಳೆದಿದ್ದರು. ಇವರು ಅಧಿಕಾರಕ್ಕೆ ಬರೋದೇ ಲೂಟಿ ಮಾಡೋದಕ್ಕೆ ಎಂದರು. ಆದ್ದರಿಂದ ಸಂಡೂರಿನಲ್ಲಿ ಅನ್ನಪೂರ್ಣ ತುಕಾರಾಮ್ ಅವರನ್ನು ಗೆಲ್ಲಿಸಿ ಅಭಿವೃದ್ಧಿಗೆ ನಿಮ್ಮ ಬೆಂಬಲ ನೀಡಿ ಎಂದರು.

ಇನ್ನೂ ಈ ವೇಳೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಮಾತನಾಡಿ, 78 ವರ್ಷದ ಸಿದ್ದರಾಮಯ್ಯ ಅವರು 28 ವರ್ಷದ ಯುವಕನ ರೀತಿಯಲ್ಲಿ ದಿನಕ್ಕೆ 12-14 ಗಂಟೆ ಕೆಲಸ ಮಾಡುತ್ತಿದ್ದಾರೆ.ಬೆಂಗಳೂರಿನಲ್ಲಿ ಇದ್ದಾಗಲೂ ದಿನಕ್ಕೆ ಏಳು-ಎಂಟು ಅಧಿಕಾರಿಗಳ ಸಭೆ ನಡೆಸ್ತಾರೆ ಎಂದು ಹೇಳಿದರು.

ಮೂರು ದಿನಗಳಿಂದ ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆವರೆಗೂ ಸಂಡೂರು ಕ್ಷೇತ್ರದಲ್ಲೇ , ಸಂಡೂರು ಜನರ ಮನೆ ಬಾಗಿಲಿಗೇ ಬಂದು ಮತ ಕೇಳುತ್ತಿದ್ದಾರೆ. ನಮ್ಮ ತಂದೆ ಸಮಾನರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನ್ನಪೂರ್ಣಮ್ಮ ಅವರಿಗೆ ಆಶೀರ್ವಾದ ಮಾಡಿ ಅಂತ ಕೇಳುತ್ತಿದ್ದಾರೆ. ಇವರ ಮಾತು ನೆರವೇರಿಸಿ ಅನ್ನಪೂರ್ಣಮ್ಮ ಅವರನ್ನು ಗೆಲ್ಲಿಸಿ. ಸಿದ್ದರಾಮಯ್ಯ ಅವರ ವಿರುದ್ಧ ಕೃತಕ ಪ್ರಕರಣ ಸೃಷ್ಟಿಸಿ ತೊಂದರೆ ಕೊಡುತ್ತಿದ್ದಾರೆ. ಇದಕ್ಕೆ ನಾವು-ನೀವು ಸೇರಿ ಬಿಜೆಪಿಗೆ ಸರಿಯಾದ ಪಾಠ ಕಲಿಸೋಣ. ಅನ್ನಪೂರ್ಣಮ್ಮ ಅವರನ್ನು ಗೆಲ್ಲಿಸಿ ಬಿಜೆಪಿಗೆ ತಕ್ಕ ಪಾಠ ಕಲಿಸೋಣ ಎಂದು ಹೇಳಿದರು.

ಬಿಸಿ ಬಿಸಿ ಸುದ್ದಿ

ಕ್ರಿಕೆಟ್ ಲೈವ್ ಸ್ಕೋರ್

ಚಿನ್ನ ಮತ್ತು ಬೆಳ್ಳಿ ಬೆಲೆಗಳು