ಬೆಂಗಳೂರು,ನ.೧೨-ಉಂಡ ಮನೆಗೆ ದ್ರೋಹ ಬಗೆದು ಕೆಲಸಕ್ಕಿದ್ದ ಮನೆಯಲ್ಲಿಯೇ ಸಂಚು ರೂಪಿಸಿ ಚಿನ್ನಾಭರಣಗಳನ್ನು ಕಳವು ಮಾಡಿಸಿದ್ದ ಪ್ರಕರಣದ ಮೂವರು ನೇಪಾಳಿಯನ್ನರನ್ನು ಬಂಧಿಸಿರುವ ಜಯನಗರ ಪೊಲೀಸರು ಕೆ.ಜಿ ೬೦೦ ಗ್ರಾಂ ಚಿನ್ನ ಸೇರಿ ೧.೧೨ ಕೋಟಿಗೂ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಿದ್ದಾರೆ. ನೇಪಾಳ ಮೂಲದ ಪ್ರಕಾಶ್ ಸಾಯಿ(೪೬) ಆಫೀಲ್ ಸಾಯಿ(೪೧)ಹಾಗೂ ಜಗದೀಶ್ ಸಾಯಿ(೩೯)ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಬಂಧಿತ ಆರೋಪಿಗಳಿಂದ ೧ಕೋಟಿ ೧೨ ಲಕ್ಷ ೨೬ ಸಾವಿರ ಮೌಲ್ಯದ ೧ ಕೆ.ಜಿ ೬೦೦ ಗ್ರಾಂ ಚಿನ್ನಾಭರಣ, ೪೫೦ ಗ್ರಾಂ ಬೆಳ್ಳಿ ಹಾಗೂ ಕೃತ್ಯಕ್ಕೆ ಬಳಸಿದ ೧ ದ್ವಿ-ಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದರು. ಕೃತ್ಯದಲ್ಲಿ ಭಾಗಿಯಾಗಿದ್ದ ದೂರುದಾರರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಕಳವು ಮಾಡಲು ನೆರವಾಗಿ ತಲೆಮರೆಸಿಕೊಂಡಿರುವ ಇನ್ನಿಬ್ಬರು ಬಂಧನಕ್ಕೆ ಶೋಧ ನಡೆಸಲಾಗಿದೆ ಎಂದು ಹೇಳಿದರು.
ಜಯನಗರ ೩ನೇ ಹಂತದಲ್ಲಿ ವ್ಯಕ್ತಿಯೊಬ್ಬರು ಕುಟುಂಬ ಸಮೇತ ಕಳೆದ ಅ.೨೧ ರಂದು ಸಂಜೆ ಹೊರ ಹೋಗಿದ್ದು,ಅವರ ತಂದೆಯವರು ಮಾತ್ರ ಮನೆಯಲ್ಲಿದ್ದು, ಸಂಜೆ ಅವರು ಮನೆಯಲ್ಲಿ ಮದ್ಯಪಾನ ಮಾಡುತ್ತಿದ್ದಾಗ ಅವರಿಗೆ ತಿಳಿಯದಂತೆ ಮಧ್ಯದೊಂದಿಗೆ ಪ್ರಜ್ಞೆ ತಪ್ಪಿಸುವ ಔಷಧಿಯನ್ನು ಕಳೆದ ೨ ವರ್ಷಗಳಿಂದ ಮನೆಕೆಲಸಕ್ಕಿದ್ದ ನೇಪಾಳ ಮೂಲದ ಇಬ್ಬರು ಬೆರೆಸಿರುತ್ತಾರೆ. ಮಧ್ಯಪಾನ ಮಾಡಿದ ತಂದೆಯು ಪ್ರಜ್ಞೆತಪ್ಪಿದಾಗ ಮನೆ ಕೆಲಸದವರಿಬ್ಬರು ಮನೆಯ ಕೊಠಡಿಯ ಬೀರುವಿನ್ನಲ್ಲಿಟ್ಟಿದ್ದ ೨ ಕೆ.ಜಿ ೫೧೦ ಗ್ರಾಂ ಚಿನ್ನಾಭರಣಗಳು ಹಾಗೂ ಬೆಳ್ಳಿಯ ವಸ್ತುಗಳನ್ನು ಹಾಗೂ ೫ ಲಕ್ಷ ನಗದು ಹಣವನ್ನು ಕಳ್ಳತನಮಾಡಿಕೊಂಡು ಹೋಗಿದ್ದ ಬಗ್ಗೆ ನೀಡಿದ ದೂರು ಆಧರಿಸಿ ಜಯನಗರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ. ಪ್ರಕರಣ ತನಿಖೆಯನ್ನು ವಿವಿಧ ಆಯಾಮಗಳಲ್ಲಿ ಕೈಗೊಂಡು, ಬಾತ್ಮೀದಾರರಿಂದ ಖಚಿತ ಮಾಹಿತಿಯನ್ನು ಕಲೆಹಾಕಿ, ಅ.೩೦ ರಂದು ವರ್ತೂರಿನ ಬಲಗೆರೆ ರಸ್ತೆಯಲ್ಲಿ ಮೂವರು ನೇಪಾಳಿ ಮೂಲದ ಇಬ್ಬರನ್ನೂ ಬಂಧಿಸಿ ವಿಚಾರಣೆ ನಡೆಸಿದಾಗ ದೂರುದಾರರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಸೇರಿ ಕಳವು ಮಾಡಿರುವುದನ್ನು ಬಾಯ್ಬಿಟ್ಟಿದ್ದಾರೆ. ಮೂವರು ಆರೋಪಿಗಳನ್ನು ಸುದೀರ್ಘ ವಿಚಾರಣೆ ನಡೆಸಿ ಮೂವರು ಆರೋಪಿಗಳ ಪೈಕಿ ಓರ್ವ ಆರೋಪಿಯು ತಾನು ವಾಸವಿರುವ ವರ್ತೂರಿನ ಮನೆಯಲ್ಲಿ ಕಳವು ಮಾಡಿದ ಚಿನ್ನಾಭರಣವನ್ನು ಇಟ್ಟಿರುವುದಾಗಿ ತಿಳಿಸಿದ ಮಾಹಿತಿಯನ್ನು ಆಧರಿಸಿ ೧.೧೨ ಕೋಟಿಗೂ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಲಾಗಿದೆ. ಉಳಿದ ಆಭರಣಗಳನ್ನು ಮನೆಕೆಲಸಕ್ಕಿದ್ದ ಇಬ್ಬರು ಬಳಿಯಿದ್ದು ಅವರ ಬಂಧನಕ್ಕೆ ಶೋಧ ನಡೆಸಲಾಗಿದೆ, ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಭರಮಪ್ಪ ಜಗಲಾಸರ್, ಜಯನಗರ ಉಪ ವಿಭಾಗದ ಎಸಿಪಿ ನಾರಾಯಣಸ್ವಾಮಿ. ವಿ ರವರ ನೇತೃತ್ವದಲ್ಲಿ, ಜಯನಗರ ಪೊಲೀಸ್ ಇನ್ಸ್‌ಪೆಕ್ಟರ್ ದೀಪಕ್.ಆರ್ ಮತ್ತವರ ಸಿಬ್ಬಂದಿ ಪ್ರಕರಣವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Author: VS NEWS DESK
pradeep blr