ಬಳ್ಳಾರಿ, ನವೆಂಬರ್ 13: ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ 2024ರ ಮತದಾನ ಆರಂಭವಾಗಿದೆ. ಜನರು ಮತಗಟ್ಟೆಗಳ ಮುಂದೆ ಮತದಾನ ಮಾಡಲು ಉತ್ಸಾಹದಿಂದ ಕಾದು ನಿಂತಿದ್ದಾರೆ. ಕ್ಷೇತ್ರದ ವ್ಯಾಪ್ತಿಯಲ್ಲಿ 2,36,100 ಮತದಾರರು ಇದ್ದು, 253 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತದಾನದ ಕಾರ್ಯಕ್ಕೆ 1,215 ಅಧಿಕಾರಿ ಹಾಗೂ ಸಿಬ್ಬಂದಿ ನೇಮಕ ಮಾಡಲಾಗಿದೆ. ಮತದಾನ ಮಾಡಲು ಸಂಜೆ 6 ಗಂಟೆಯ ತನಕ ಅವಕಾಶವಿದೆ.
ಬುಧವಾರ ಬೆಳಗ್ಗೆ 7 ಗಂಟೆಗೆ ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಆರಂಭವಾಗಿದೆ. ಕುಡತಿನಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮಹಿಳೆಯರು ಸಾಲಾಗಿ ನಿಂತು ಮತದಾನವನ್ನು ಮಾಡಿದರು.
ಸಂಡೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಇ. ತುಕಾರಾಂ ಬಳ್ಳಾರಿ ಕ್ಷೇತ್ರದಿಂದ ಲೋಕಸಭೆ ಚುನಾವಣೆ-2024ಕ್ಕೆ ಸ್ಪರ್ಧಿಸಿ ಗೆಲುವು ಸಾಧಿಸಿದ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದ್ದರಿಂದ ಈಗ ಉಪ ಚುನಾವಣೆ ಎದುರಾಗಿದ್ದು, ಇಂದು ಮತದಾನ ನಡೆಯುತ್ತಿದೆ.
ಉಪ ಚುನಾವಣೆಗೆ ಕಾಂಗ್ರೆಸ್ ಇ. ತುಕಾರಾಂ ಅವರ ಪತ್ನಿ ಇ. ಅನ್ನಪೂರ್ಣ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಬಿಜೆಪಿಯಿಂದ ಬಂಗಾರ ಹನುಮಂತ ಅಭ್ಯರ್ಥಿ. ಒಟ್ಟು ಆರು ಅಭ್ಯರ್ಥಿಗಳು ಕಣದಲ್ಲಿದ್ದು, ಅಭ್ಯರ್ಥಿಗಳ ಭವಿಷ್ಯ ಇಂದು ಮತಯಂತ್ರ ಸೇರಲಿದೆ. ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ.
ಅಭ್ಯರ್ಥಿಯಿಂದ ಮತದಾನ: ಬಳ್ಳಾರಿ ಸಂಸದ ಇ. ತುಕಾರಾಂ ಪತ್ನಿ ಇ. ಅನ್ನಪೂರ್ಣ, ಪುತ್ರಿ ಜೊತೆ ಬಂದು ಮತದಾನ ಮಾಡಿದರು. “ಮತದಾನದಿಂದ ಯಾರೂ ಸಹ ದೂರ ಉಳಿಯಬೇಡಿ ಎಲ್ಲರೂ ತಪ್ಪದೇ ಮತದಾನ ಮಾಡಿ” ಎಂದು ಕರೆ ನೀಡಿದರು.
ಸದ್ಯದ ಮಾಹಿತಿ ಪ್ರಕಾರ ಬೆಳಗ್ಗೆ 7 ರಿಂದ 9 ಗಂಟೆಯ ತನಕ ಸಂಡೂರು ಕ್ಷೇತ್ರದಲ್ಲಿ 9.99ರಷ್ಟು ಮತದಾನವಾಗಿದೆ. ವೇತನ ಸಹಿತ ರಜೆ: ಉಪ ಚುನಾವಣೆಯ ಮತದಾನ ಮಾಡಲು ಅನುಕೂಲವಾಗುವಂತೆ ಚುನಾವಣಾ ಆಯೋಗದಂತೆ ನಿರ್ದೇಶನದಂತೆ ವೇತನ ಸಹಿತ ರಜೆ ನೀಡಲಾಗಿದೆ. ಸಂಡೂರು ವ್ಯಾಪ್ತಿಯ ಕಾರ್ಖಾನೆ, ವಾಣಿಜ್ಯ ಸಂಸ್ಥೆ, ಅಂಗಡಿ ಹಾಗೂ ಇತರೆ ಸಂಸ್ಥೆಗಳ ಮಾಲೀಕರು ಕಾರ್ಮಿಕರು ಮತದಾನ ಮಾಡಲು ಅನುವು ಮಾಡಿಕೊಡಬೇಕು ಎಂದು ಕಾರ್ಮಿಕ ಇಲಾಖೆಯ ಕಾರ್ಮಿಕ ಅಧಿಕಾರಿ ಸಿದ್ದಪ್ಪ ಖೈನೂರ ತಿಳಿಸಿದ್ದಾರೆ.
ಕಾರ್ಖಾನೆಗಳು, ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು ಹಾಗೂ ಇತರ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ 1951ರ ಪ್ರಜಾ ಪ್ರತಿನಿಧಿ ಕಾಯ್ದೆ, ಸೆಕ್ಷನ್ 135(ಬಿ) ರಡಿ ಹಾಗೂ ಕೈಗಾರಿಕಾ ಸಂಸ್ಥೆಗಳ (ರಾಷ್ಟ್ರೀಯ ಮತ್ತು ಹಬ್ಬದ ರಜೆಗಳು) ಕಾಯ್ದೆ 1963 ಕಲಂ 3(ಎ) ರನ್ವಯ ಕಾರ್ಮಿಕರಿಗೆ ವೇತನ ಸಹಿತ ರಜೆ ಮಂಜೂರು ಮಾಡಿ ಸಂವಿಧಾನಾತ್ಮಕ ಹಕ್ಕಾದ ಕಡ್ಡಾಯವಾಗಿ ಮತವನ್ನು ಚಲಾಯಿಸುವುದಕ್ಕಾಗಿ ಎಲ್ಲಾ ಮಾಲೀಕರು, ನಿಯೋಜಕರು ಅನುವು ಮಾಡಿಕೊಡಬೇಕು ಎಂದು ಸೂಚಿಸಲಾಗಿದೆ.
ಕ್ಷೇತ್ರದ ವ್ಯಾಪ್ತಿಯ ಎಲ್ಲಾ ಕಾರ್ಖಾನೆಗಳು, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಮಾಲೀಕರು ಮತದಾನದಂದು ಕಾಯ್ದೆಯನ್ವಯ ಅರ್ಹ ಕಾರ್ಮಿಕರು ಮತದಾನ ಮಾಡಲು ಅನುಕೂಲವಾಗುವಂತೆ ವೇತನ ಸಹಿತ ರಜೆ ನೀಡಬೇಕು. ತಪ್ಪಿದ್ದಲ್ಲಿ ಸಂಬಂಧಪಟ್ಟ ಸಂಸ್ಥೆ ನಿಯೋಜಕರ ವಿರುದ್ಧ ನಿಯಮಾನುಸಾರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
Author: VS NEWS DESK
pradeep blr