ಬೆಂಗಳೂರು ನವೆಂಬರ್ 29: ಮುಸ್ಲಿಂ ಸಮುದಾಯದ ಮತದಾನದ ಹಕ್ಕು ರದ್ದುಪಡಿಸಲು ಕಾನೂನು ಜಾರಿಗೆ ತರಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಸ್ವಾಮೀಜಿ ಹೇಳಿಕೆ ಪ್ರಚೋದನಕಾರಿಯಾಗಿದ್ದು, ಕೋಮು ಸೌಹಾರ್ದತೆಗೆ ಧಕ್ಕೆ ತರಬಹುದು ಎಂದು ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ 299ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಸ್ವಾಮೀಜಿ ಹೇಳಿದ್ದೇನು?
ಕಳೆದ ಮಂಗಳವಾರ ಫ್ರೀಡಂ ಪಾರ್ಕ್‌ನಲ್ಲಿ ವಕ್ಫ್ ಮಂಡಳಿಯಿಂದ ರೈತರ ಭೂಮಿಗಳ ಕಬಳಿಕೆ ಆರೋಪದ ವಿಚಾರವಾಗಿ ಭಾರತೀಯ ಕಿಸಾನ್ ಸಂಘ (ಬಿಕೆಎಸ್), ಕರ್ನಾಟಕ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರೈತ ಘರ್ಜನೆ ರ್ಯಾಲಿಯಲ್ಲಿ ಕುಮಾರ ಚಂದ್ರಶೇಖರನಾಥ ಸ್ವಾಮೀಜಿಯವರು ಈ ಹೇಳಿಕೆ ನೀಡಿದ್ದರು. ಬಳಿಕ ಅವರ ಈ ಹೇಳಿಕೆಯು ವಿವಾದಕ್ಕೆ ಕಾರಣವಾಗಿತ್ತು.
ಹೇಳಿಕೆ ಬಳಿಕಿ ಸ್ವಾಮೀಜಿ ಕ್ಷಮೆಯಾಚನೆ
ವಕ್ಫ್ ವಿವಾದ
ಈ ಸಂಬಂಧ ಪತ್ರಿಕಾ ಪ್ರಕಟಣೆಯಲ್ಲಿ ವಿಷಾದ ವ್ಯಕ್ತಪಡಿಸಿದ ಸ್ವಾಮೀಜಿಯವರು, ‘ಮುಸ್ಲಿಮರು ಕೂಡ ಈ ದೇಶದ ಪ್ರಜೆಗಳು. ಎಲ್ಲರಂತೆ ಅವರಿಗೂ ಮತದಾನದ ಹಕ್ಕಿದೆ. ನಿನ್ನೆಯ ನನ್ನ ಹೇಳಿಕೆಯಿಂದ ನಮ್ಮ ಮುಸ್ಲಿಂ ಭಾಧವರಿಗೆ ನೋವಾಗಿದ್ದರೆ, ಅದಕ್ಕಾಗಿ ನಾನು ಪ್ರಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ’ ಎಂದಿದ್ದರು.
‘ತಮ್ಮ ಹೇಳಿಕೆ ಯಾವುದೇ ಸಮುದಾಯವನ್ನು ಗುರಿಯಾಗಿಸುವ ಉದ್ದೇಶ ಹೊಂದಿಲ್ಲ. ಆದರೆ ವಕ್ಫ್ ಆಸ್ತಿಗಳ ದುರುಪಯೋಗವನ್ನು ಪರಿಹರಿಸುವ ಗುರಿ ಹೊಂದಿದೆ’ ಎಂದು ಸ್ಪಷ್ಟಪಡಿಸಿರುವ ಸ್ವಾಮೀಜಿ, ‘ ಒಕ್ಕಲಿಗ ಸಮುದಾಯ ಎಲ್ಲರನ್ನೂ ಒಳಗೊಳ್ಳುವ ಮತ್ತು ಸಾಮರಸ್ಯದ ಸ್ವಭಾವಕ್ಕೆ ಒತ್ತು ನೀಡುತ್ತದೆ. ನಮ್ಮ ಮಠವು ಐತಿಹಾಸಿಕವಾಗಿ ಮುಸ್ಲಿಮರು ಮತ್ತು ಇತರ ಧರ್ಮಗಳೊಂದಿಗೆ ಸೌಹಾರ್ದ ಸಂಬಂಧ ಹೊಂದಿದೆ’ ಎಂದು ಹೇಳಿದ್ದರು.’ನಾವು ಯಾವಾಗಲೂ ಎಲ್ಲಾ ಧರ್ಮದ ಜನರನ್ನು ಸಮಾನವಾಗಿ ಕಾಣುತ್ತೇವೆ. ಮುಸ್ಲಿಮರು ಅಗಾಗ್ಗೆ ನಮ್ಮ ಮಠಕ್ಕೆ ಭೇಟಿ ನೀಡುತ್ತಾರೆ. ಮತ್ತು ಅವರ ಸಾಮಾಜಿಕ ಕಾರ್ಯಗಳಲ್ಲಿ ನಾವು ಸಕ್ರಿಯವಾಗಿ ಭಾಗವಹಿಸುತ್ತೇವೆ. ಯಾವುದೇ ಸಮುದಾಯದ ಬಗ್ಗೆ ಸಹಿಷ್ಣತೆ ಇಲ್ಲ’ ಎಂದ ಸ್ಪಷ್ಟಪಡಿಸಿದ್ದರು.
ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು ವಿಜಯಪುರ ಜಿಲ್ಲೆಯ ರೈತರ ಜಮೀನು ಒಡೆತನಕ್ಕೆ ಹಕ್ಕು ಮಂಡಿಸಿದ ನಂತರ ಬಿಜೆಪಿ ಮತ್ತು ಆಡಳಿತಾರೂಡ ಕಾಂಗ್ರೆಸ್ ಪಕ್ಷಗಳ ನಡುವೆ ಮಾತಿನ ಸಮರವೇ ನಡೆಯುತ್ತಿದೆ. ವಿಜಯಪುರ ಜಿಲ್ಲಾ ವಕ್ಫ್ ಬೋರ್ಡ್ ನೀಡಿರುವ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ 14,201 ಎಕರೆ ಜಮೀನು ವಕ್ಪ್ ಸೇರಿದೆ. ಈ ಪೈಕಿ 1354 ಎಕರೆ ಒತ್ತುವರಿಯಾಗಿದೆ. ಉಳಿದ ಜಮೀನು ವಕ್ಫ್ ಇನ್ಟಿಟ್ಯೂಶನ್ಸ್, ಇನಾಮ್ ಆಬ್ಲಿಷನ್ಸ್, ಲ್ಯಾಂಡ್ ರಿಫಾರ್ಮ್ ಹಾಗೂ ವಕ್ಪ್ ಆ್ಯಕ್ಟ್ ವಶದಲ್ಲಿದೆ ಎಂದು ತಿಳಿಸಿದೆ.
ಆದರೆ ಜಿಲ್ಲಾ ವಕ್ಫ್ ಬೋರ್ಡ್ ಆಸ್ತಿಯಲ್ಲಿ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿನ 1200 ಎಕರೆ ಜಮೀನು ಶಾ ಅಮೀನುದ್ದೀನ್ ದರ್ಗಾಕ್ಕೆ ಸೇರಿದ್ದು ಎಂದು ಹಲವು ತಾಲೂಕಿನ ರೈತರಿಗೆ ತಹಶೀಲ್ದಾರ್ ನೋಟಿಸ್ ನೀಡಿದ್ದಾರೆ. ಆದರೆ ಹೊನವಾಡ ಗ್ರಾಮದಲ್ಲಿ ಶಾ ಅಮೀನುದ್ದೀನ್ ದರ್ಗಾವೇ ಇಲ್ಲ. ಆದರೂ 13 ತಾಲೂಕಿನ ರೈತರಿಗೆ “ನಿಮ್ಮ ಜಮೀನುಗಳು ವಕ್ಫ್ ಬೋರ್ಡ್ ಆಸ್ತಿಯೆಂದು” ಆಯಾ ತಹಶೀಲ್ದಾರ್ ಕಚೇರಿಯಿಂದ ತಿಳವಳಿಕೆ ಪತ್ರ ನೀಡಲಾಗಿದೆ. ಇದಲ್ಲದೇ, ಇನ್ನೂ ನೂರಾರು ರೈತರಿಗೆ ನೊಟೀಸ್ ಜಾರಿ ಮಾಡಲು ತಹಶೀಲ್ದಾರರು ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ.
Author: VS NEWS DESK
pradeep blr