ಚನ್ನಪಟ್ಟಣ ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಕಾಂಗ್ರೆಸ್ ಶಾಸಕರಾಗಿರುವ ಸಿ.ಪಿ.ಯೋಗೇಶ್ವರ್ ಅವರು ಇಂದು ನೂತನ ಕಚೇರಿ ಉದ್ಘಾಟಿಸಿದ್ದಾರೆ. ಇದೇ ವೇಳೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. ಕುಮಾರಸ್ವಾಮಿ ಅವರು ಕಳೆದ ಏಳು ವರ್ಷಗಳಿಂದ ಶಾಸಕರಾಗಿದ್ದರೂ ಇಲ್ಲಿ ಕಚೇರಿ ತೆರೆದಿರಲಿಲ್ಲ ಎಂದು ಯೋಗೇಶ್ವರ್ ದೂರಿದ್ದಾರೆ.
ಈ ಉಪಚುನಾವಣೆಯಲ್ಲಿ ನಾನು ಶಾಸಕನಾಗಿ ಆಯ್ಕೆಯಾದ ಮೇಲೆ ಇದು ನನ್ನ ಜವಾಬ್ದಾರಿ. ಇನ್ನು ಕಾಂಗ್ರೆಸ್ ಪಕ್ಷ ಸೇರುವಾಗ ನಾನು ಯಾವುದೇ ಡಿಮ್ಯಾಂಡ್ ಇಟ್ಟಿರಲಿಲ್ಲ. ನನ್ನ ಸಂಪೂರ್ಣ ಗಮನವು ಬಾಕಿ ಉಳಿದಿರುವ ಮೂರೂವರೆ ವರ್ಷಗಳ ಅವಧಿಯಲ್ಲಿ ಚನ್ನಪಟ್ಟಣವನ್ನು ಅಭಿವೃದ್ಧಿಪಡಿಸುವುದು ಎಂದು ಯೋಗೇಶ್ವರ್ ಹೇಳಿದ್ದಾರೆ. ರಾಜ್ಯ ಉಪಮುಖ್ಯಮಂತ್ರಿಗಳು ನಮ್ಮ ರಾಮನಗರ ಜಿಲ್ಲೆಯವರೇ ಆಗಿರುವುದು ನಮಗೆ ಆನೆಬಲ ಎಂದು ಹೇಳಿದ್ದಾರೆ.
ನಮ್ಮ ಜಿಲ್ಲೆಯವರೇ ಆಗಿರುವ ಎಚ್.ಸಿ.ಬಾಲಕೃಷ್ಣ ಅವರು ಪಕ್ಷದಲ್ಲಿ ನನಗಿಂತ ಹಿರಿಯ ನಾಯಕರಾಗಿದ್ದಾರೆ. ಅವರಿಗೆ ಸಚಿವ ಸ್ಥಾನ ಸಿಕ್ಕರೂ ನನಗೆ ಭಾರಿ ಸಂತೋಷ. ಯಾರೇ ಸಚಿವರಾದರೂ ರಾಮನಗರ ಜಿಲ್ಲೆಯ ಅಭಿವೃದ್ಧಿಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಎಂದಿದ್ದಾರೆ. ಸಚಿವ ಸಂಪುಟ ಪುನರ್ ರಚನೆ ವಿಚಾರವಾಗಿಯೂ ಅವರು ಮಾತನಾಡಿದ್ದಾರೆ. ಕಾಂಗ್ರೆಸ್ ಪಕ್ಷ ಯಾವ ತೀರ್ಮಾನ ತೆಗೆದುಕೊಂಡರೂ ಸ್ವಾಗತಿಸುತ್ತೇನೆ. ಎಲ್ಲ ನಿರ್ಧಾರಕ್ಕೂ ಬದ್ಧ ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಶೀಘ್ರದಲ್ಲೇ ನನಗೆ ಸಮಯಾವಕಾಶ ನೀಡುವುದಾಗಿ ಹೇಳಿದ್ದಾರೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾರಣ ಕಾರ್ಯಕರ್ತರಿಗೆ ಒಂದು ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಆ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಬರುತ್ತಾರೆ. ಚನ್ನಪಟ್ಟಣದಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆಯಾಗುತ್ತೆ ಎಂದು ಚುನಾವಣಾ ವೇಳೆಯೇ ನಾನು ಸಿಎಂ ಗಮನಕ್ಕೆ ತಂದಿದ್ದೆ. ಹಾಲಿನ ದರವನ್ನು ಹೆಚ್ಚಿಸಬೇಕೆಂದು ಮನವಿ ಮಾಡಿದ್ದೆ. ಇದನ್ನು ಬೆಳಗಾವಿ ಅಧಿವೇಶನದಲ್ಲೂ ಎಲ್ಲರ ಗಮನಕ್ಕೆ ತರುತ್ತೇನೆ ಎಂದು ಯೋಗೇಶ್ವರ್ ಹೇಳಿದ್ದಾರೆ.
ಇತ್ತೀಚೆಗೆ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವ ಬಗ್ಗೆಯೂ ಯೋಗೇಶ್ವರ್ ಮಾತನಾಡಿದ್ರು. ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವುದರಲ್ಲಿ ತಪ್ಪೇನಿದೆ? ಅವರಿಗೆ ತಮ್ಮದೇ ಆದ ಸಾಮರ್ಥ್ಯವಿದ್ದು, ಅವರಲ್ಲಿ ಯಾವುದೇ ದೌರ್ಬಲ್ಯ ಇಲ್ಲ ಎಂದು ಹೇಳಲ್ಲ. ಅವರಿಗೆ ಅವಕಾಶಗಳು ಬಾಗಿಲು ತಟ್ಟಿದರೆ, ನಾನು ಕೂಡ ಅವರಿಗೆ ಬೆಂಬಲ ನೀಡುತ್ತೇನೆ ಎಂದು ಸಿಎಂ ಆಗುವ ವಿಚಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ರು.
ಚನ್ನಪಟ್ಟಣ ಕ್ಷೇತ್ರದಲ್ಲಿ ನನಗೆ ಮತ್ತು ಕಾಂಗ್ರೆಸ್ಗೆ ಈ ಬಾರಿ ಗೆಲುವಿನ ಪರಿಸ್ಥಿತಿ ಸೃಷ್ಟಿಯಾಯಿತು. ಒಂದು ವೇಳೆ ನಾನು ಚುನಾವಣೆಗೆ ನಿಲ್ಲದಿದ್ದರೆ ಕಂಡಿತವಾಗಿಯೂ ಕಾಂಗ್ರೆಸ್ ಸೋಲು ಕಾಣುತ್ತಿತ್ತು. ಮತ್ತೊಂದೆಡೆ ಕಾಂಗ್ರೆಸ್ ಏನಾದ್ರೂ ಸೋತಿದ್ದರೆ, ಡಿ.ಕೆ.ಶಿವಕುಮಾರ್ ಅವರ ಘನತೆಗೆ ಧಕ್ಕೆ ಬರುತ್ತಿತ್ತು ಎಂದು ಹೇಳಿದ್ರು.
Author: VS NEWS DESK
pradeep blr