ಪ್ರಧಾನಿ ನರೇಂದ್ರ ಮೋದಿ ಕುವೈತ್ ದೊರೆ ಭೇಟಿ; ಅರೇಬಿಯನ್ ಗಲ್ಫ್ ಕಪ್ ಉದ್ಘಾಟನೆಯಲ್ಲಿ ಭಾಗಿ

ಕುವೈತ್: ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ 26ನೇ ಅರೇಬಿಯನ್ ಗಲ್ಫ್ ಕಪ್ ಉದ್ಘಾಟನಾ ಸಮಾರಂಭದಲ್ಲಿ ಗೌರವ ಅತಿಥಿಯಾಗಿ ಪಾಲ್ಗೊಂಡರು. ಜತೆಗೆ ಕುವೈತ್ ದೊರೆ ಶೇಖ್ ಮಿಶಾಲ್ ಅಲ್ ಅಹ್ಮದ್ ಅಲ್-ಜಾಬಿರ್ ಅಲ್ ಸಬಾಹ್ ಅವರನ್ನು ಭೇಟಿಯಾದರು.

ಕುವೈತ್ ನಗರದ ಜಾಬಿರ್ ಅಲ್ ಅಹ್ಮದ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು. ಕುವೈತ್ ದೊರೆಯ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಕುವೈತ್ ಪ್ರವಾಸ ಕೈಗೊಂಡಿದ್ದು, ಭಾರತದ ಪ್ರಧಾನಿ ಕುವೈತ್‌ ಗೆ ಭೇಟಿ ನೀಡುತ್ತಿರುವುದು 43 ವರ್ಷಗಳಲ್ಲಿ ಇದೇ ಮೊದಲು.

ಕುವೈತ್‌ನ ದೊರೆ ಜತೆಗಿರುವ ಫೋಟೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಮೋದಿ, “ಕುವೈತ್‌ನ ದೊರೆ ಘನವೆತ್ತ ಶೇಖ್ ಮಿಶಾಲ್ ಅಲ್ ಅಹ್ಮದ್ ಅಲ್-ಜಾಬಿರ್ ಅಲ್ ಸಬಾಹ್ ಅವರನ್ನು ಅರೇಬಿಯನ್ ಗಲ್ಫ್ ಕಪ್ ಉದ್ಘಾಟನಾ ಸಮಾರಂಭದಲ್ಲಿ ಭೇಟಿ ಮಾಡಿರುವುದು ಸಂತಸದ ಕ್ಷಣ” ಎಂದು ಬಣ್ಣಿಸಿದ್ದಾರೆ. ಉಭಯ ಗಣ್ಯರ ಈ ಭೇಟಿ ಪರಸ್ಪರರ ನಡುವೆ ಅನೌಪಚಾರಿಕ ಸಂವಾದಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಹೇಳಿದೆ.

ಕುವೈತ್ ದ್ವೈವಾರ್ಷಿಕ ಅರೇಬಿಯನ್ ಗಲ್ಫ್ ಕಪ್ ಆಯೋಜಿಸುತ್ತಾ ಬಂದಿದ್ದು, ಇದರಲ್ಲಿ ಜಿಸಿಸಿ ದೇಶಗಳಾದ ಇರಾಕ್ ಹಾಗೂ ಯೆಮನ್ ಸೇರಿದಂತೆ ಎಂಟು ದೇಶಗಳು ಭಾಗವಹಿಸುತ್ತವೆ. ಆತಿಥ್ಯ ವಹಿಸಿದ ಕುವೈತ್ ಉದ್ಘಾಟನಾ ಪಂದ್ಯದಲ್ಲಿ ಒಮಾನ್ ವಿರುದ್ಧ ಸೆಣೆಸುತ್ತಿದೆ.

ಈ ಫುಟ್ಬಾಲ್ ಟೂರ್ನಿ ಈ ಭಾಗದ ಪ್ರಮುಖ ಟೂರ್ನಿಗಳಲ್ಲೊಂದಾಗಿದ್ದು, ಇತರ ದೇಶಗಳಿಗಿಂತ ಹೆಚ್ಚು ಬಾರಿ ಕುವೈತ್ ಪ್ರಶಸ್ತಿ ಗೆದ್ದಿದೆ. ಪಾಲ್ಗೊಂಡ ಎಲ್ಲ ರಾಷ್ಟ್ರಗಳಿಗೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದರು.

 

ಬಿಸಿ ಬಿಸಿ ಸುದ್ದಿ

ಕ್ರಿಕೆಟ್ ಲೈವ್ ಸ್ಕೋರ್

ಚಿನ್ನ ಮತ್ತು ಬೆಳ್ಳಿ ಬೆಲೆಗಳು