ಬೆಂಗಳೂರು, ಡಿಸೆಂಬರ್ 21: ಬೆಂಗಳೂರಿನ ನೆಲಮಂಗಲದ ಟಿ. ಬೇಗೂರು ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 6 ಜನರು ಮೃತಪಟ್ಟಿದ್ದಾರೆ. ಲಾರಿ ಐಷಾರಾಮಿ ಕಾರಿನ ಮೇಲೆ ಉರುಳಿ ಬಿದ್ದ ಪರಿಣಾಮ ಸಾಫ್ಟ್‌ವೇರ್ ಕಂಪನಿ ನಡೆಸುತ್ತಿದ್ದ ಚಂದ್ರ ಯಾಗಪ್ಪ ಗೋಳ್ ಸಾವನ್ನಪ್ಪಿದ್ದಾರೆ. ಕೆಲವೇ ದಿನಗಳ ಹಿಂದೆ ವೋಲ್ವೋ ಕಾರು ತೆಗೆದುಕೊಂಡಿದ್ದ ಅವರು, ವಿಜಯಪುರಕ್ಕೆ ಹೊರಟಿದ್ದರು.ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಚಂದ್ರ ಯಾಗಪ್ಪ ಗೋಳ್ (48), ಗೌರಾಬಾಯಿ (42), ದೀಕ್ಷಾ (12), ಜಾನ್ (16), ವಿಜಯಲಕ್ಷ್ಮಿ (36), ಆರ್ಯ (6) ಮೃತಪಟ್ಟಿದ್ದಾರೆ. ಲಾರಿ ಚಾಲಕ ಆರೀಫ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
ಅಪಘಾತ ಹೇಗೆ ನಡೆಯಿತು?; ಲಾರಿ ಚಾಲಕ ಆರೀಫ್ ರಸ್ತೆ ಅಪಘಾತ ನಡೆದಿದ್ದು ಹೇಗೆ? ಎಂದು ಹೇಳಿದ್ದಾರೆ. ಎದುರುಗಡೆಯಿಂದ ಬಂದ ಕಾರನ್ನು ತಪ್ಪಿಸಲು ಹೋಗಿ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ಹೇಳಿದರು. ಘಟನೆಯಿಂದ ತೀವ್ರವಾದ ನೋವಾಗಿದೆ ಎಂದು ತಿಳಿಸಿದರು.ಲಾರಿಯ ಮುಂದೆ ಏಕಾಏಕಿ ಬಂದ ಕಾರನ್ನು ತಪ್ಪಿಸಲು ಹೋಗಿ ನನ್ನ ಕಂಟೇನರ್ ಲಾರಿ ನಿಯಂತ್ರಣ ತಪ್ಪಿತು. ಡಿವೈಡರ್ ಹಾರಿ ಮತ್ತೊಂದು ರಸ್ತೆಗೆ ನುಗ್ಗಿ ಲಾರಿಗೆ ಡಿಕ್ಕಿ ಆಯಿತು, ಆಗ ಕಾರಿನ ಮೇಲೆ ಪಲ್ಟಿಯಾಗಿದೆ. ಬಳಿಕ ನನಗೆ ಏನಾಯಿತು ಗೊತ್ತಿಲ್ಲ?, ಆಸ್ಪತ್ರೆಗೆ ಬಂದಾಗ ನನಗೆ ಎಚ್ಚರಿಕೆ ಆಗಿದೆ ಎಂದರು.ಬೆಂಗಳೂರು ಕಡೆಯಿಂದ ತುಮಕೂರು ಕಡೆಗೆ ಸಂಚಾರ ನಡೆಸುತ್ತಿದ್ದ ಲಾರಿ ನಿಯಂತ್ರಣ ತಪ್ಪಿ, ಡಿವೈಡರ್ ಹತ್ತಿ ಐಷಾರಾಮಿ ವೋಲ್ವೋ ಕಾರು ಕೆಎ 01, ಎನ್‌ಡಿ 1536 ಮೇಲೆ ಬಿದ್ದ ಪರಿಣಾಮ ಆರು ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ಈ ಕುರಿತು ನೆಲಮಂಗಲ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ತನಿಖೆಗೆ ವಿಶೇಷ ತನಿಖಾಧಿಕಾರಿಯಾಗಿ ಜಗದೀಶ್ ಅವರನ್ನು ನೇಮಕ ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ನಡೆದಿದ್ದು, ಮೃತದೇಹವನ್ನು ಸಾಗಿಸಲು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ.
ಚಂದ್ರ ಯಾಗಪ್ಪ ಗೋಳ್ ಕೆಲವು ದಿನಗಳ ಹಿಂದೆ ಸಾಫ್ಟ್‌ವೇರ್ ಕಂಪನಿ ತೆರೆದಿದ್ದರು. ಕಂಪನಿಯ ಸಿಬ್ಬಂದಿಯಾದ ಶ್ರೀನಿವಾಸ್ ಘಟನೆ ಕುರಿತು ಮಾತನಾಡಿದ್ದು, “ತಂದೆಗೆ ಹುಷಾರಿಲ್ಲ ಎಂದು ಕುಟುಂಬ ಸಮೇತ ಊರಿಗೆ ಹೊರಟಿದ್ದರು. ಇವರ ಜೊತೆಗೆ ತಮ್ಮನ ಪತ್ನಿ ಹಾಗೂ ಅವರ ಮಗು ಎಲ್ಲರು ಇದ್ದರು” ಎಂದು ಹೇಳಿದ್ದಾರೆ.ಈ ಅಪಘಾತದ ಕಾರಣ ಬೆಂಗಳೂರು-ತುಮಕೂರು ರಸ್ತೆಯಲ್ಲಿ ಸುಮಾರು 8 ಕಿ. ಮೀ. ನಷ್ಟು ಟ್ರಾಫಿಕ್ ಜಾಮ್ ಉಂಟಾಗಿತ್ತು. ಕ್ರೇನ್ ಸಹಾಯದಿಂದ ಲಾರಿಯನ್ನು ಮೇಲೆತ್ತಿ, ಪೊಲೀಸರು ಕಾರಿನಲ್ಲಿ ಸಿಲುಕಿದ್ದ ಶವವನ್ನು ಹೊರತೆಗೆದು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.
ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್ ನಿವಾಸಿಯಾಗಿದ್ದ ಚಂದ್ರ ಯಾಗಪ್ಪ ಗೋಳ್ ಕೆಲವು ತಿಂಗಳ ಹಿಂದೆ ಐಎಎಸ್‌ಟಿ ಎಂಬ ಹೆಸರಿನ ಸಾಫ್ಟ್‌ವೇರ್ ಕಂಪನಿ ತೆರೆದಿದ್ದರು. ಈ ಕಂಪನಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. ಅಪಘಾತದ ಬಗ್ಗೆ ತಿಳಿಯುತ್ತಿದ್ದಂತೆ ಕಛೇರಿಯನ್ನು ಮುಚ್ಚಿ ಘಟನಾ ಸ್ಥಳಕ್ಕೆ ತೆರಳಿದರು. ಇವರು ಮೂಲತಃ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೊರಬಗಿ ಗ್ರಾಮದ ನಿವಾಸಿ.
Author: VS NEWS DESK
pradeep blr