ಬೆಂಗಳೂರು 2ನೇ ವಿಮಾನ ನಿಲ್ದಾಣ ಸ್ಥಳ ಆಯ್ಕೆ ಕಸರತ್ತು ಇನ್ನೇನು ಕೊನೆ ಹಂತ ತಲುಪಿದ್ದು ಇನ್ನು ಕೆಲವೇ ದಿನಗಳಲ್ಲಿ ಸ್ಥಳ ಘೋಷಣೆ ಮಾಡುವ ಸಾಧ್ಯತೆ. ಬೆಂಗಳೂರು ಸುತ್ತ ಮುತ್ತ ಈಗಾಗಲೇ 6 ಸ್ಥಳಗಳನ್ನು ಆಯ್ಕೆ ಮಾಡಲಾಗಿದ್ದು ಎಲ್ಲಿ ವಿಮಾನ ನಿಲ್ದಾಣ ಮಾಡಿದರೆ ಸೂಕ್ತ ಎಂದು ಹಲವು ಸುತ್ತಿನಲ್ಲಿ ಚರ್ಚೆ ಮಾಡಲಾಗಿದೆ. ಎಲ್ಲಾ ಸಾಧಕ ಬಾಧಕಗಳನ್ನು ಗಮನಿಸಿ ತೀರ್ಮಾನ ಮಾಡುತ್ತೇವೆ ಎಂದು ಕೈಗಾರಿಕಾ ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ.ಕನಕಪುರ ರಸ್ತೆಯ ಹಾರೋಹಳ್ಳಿ, ಮಾಗಡಿ, ಬಿಡದಿ, ನೆಲಮಂಗಲ ಮತ್ತು ಡಾಬಸ್‌ಪೇಟೆ ಬಳಿ ಸ್ಥಳಗಳನ್ನು ಗುರುತಿಸಲಾಗಿದೆ. ಸ್ಥಳ ಆಯ್ಕೆ ವಿಚಾರ ಚರ್ಚಿಸಲು ಈಗಾಗಲೇ 11 ಸುತ್ತುಗಳಲ್ಲಿ ಸಭೆ ನಡೆಸಲಾಗಿದೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಸೇರಿದಂತೆ ಪ್ರಮುಖ ಸಚಿವರು, ಅಧಿಕಾರಿಗಳು ಸರಣಿ ಸಭೆಗಳನ್ನು ನಡೆಸುತ್ತಿದ್ದು ಸ್ಥಳ ಆಯ್ಕೆ ಬಹುತೇಕ ಅಂತಿಮ ಹಂತ ತಲುಪಿದೆ.
ಸ್ಥಳ ಆಯ್ಕೆ ವಿಚಾರ ಈಗ ಭಾರಿ ಕುತೂಹಲ ಕೆರಳಿಸಿದೆ. ತಮಿಳುನಾಡು ಸರ್ಕಾರ ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಯೋಜನೆ ಘೋಷಣೆ ಮಾಡಿದ ಬಳಿಕ ಕರ್ನಾಟಕ ಸರ್ಕಾರದ ಸ್ಥಳ ಆಯ್ಕೆ ಮತ್ತಷ್ಟು ಸುಲಭವಾಗಿದೆ.
ನೆಲಮಂಗಲದಲ್ಲಿ ವಿಮಾನ ನಿಲ್ದಾಣ
ಈಗ ಗುರುತಿಸಿರುವ ಸ್ಥಳಗಳಲ್ಲಿ ನೆಲಮಂಗಲವೇ ಸೂಕ್ತ ಆಯ್ಕೆ ಎನ್ನುವ ಕೂಗು ಕೇಳಿ ಬಂದಿದೆ. ಬೆಂಗಳೂರು ಅಭಿವೃದ್ಧಿ ದೃಷ್ಟಿಯಿಂದ ಈ ಸ್ಥಳ ಎಲ್ಲದಕ್ಕೂ ಅನುಕೂಲವಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಸಮೀಪವೇ ಇರುವ ಕಾರಣ ಸಂಪರ್ಕದ ಸಮಸ್ಯೆ ಕೂಡ ಇರುವುದಿಲ್ಲ ಎಂದು ಹೇಳಲಾಗಿದೆ
ನೆಲಮಂಗಲ ಭಾಗದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾದರೆ ಮೈಸೂರು ರಸ್ತೆ, ಕನಕಪುರ ರಸ್ತೆ ಸಂಪರ್ಕಕ್ಕೂ ಸುಲಭವಾಗುತ್ತದೆ. ಈಗಾಗಲೇ ನೈಸ್ ರಸ್ತೆಯಿದ್ದು, ಫೆರಿಫೆರಲ್ ರಿಂಗ್ ರಸ್ತೆ ಮತ್ತು ಸ್ಯಾಟಲೈಟ್ ಟೌನ್ ರಿಂಗ್ ರಸ್ತೆಗಳು ಕೂಡ ಬೆಂಗಳೂರಿನ ದಕ್ಷಿಣ ಭಾಗದ ಪ್ರಯಾಣಿಕರಿಗೆ ಉತ್ತಮ ಸಂಪರ್ಕ ಒದಗಿಸಲು ಸಹಾಯ ಮಾಡುತ್ತವೆ.
Author: VS NEWS DESK
pradeep blr