ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣದ ಬಗ್ಗೆ ಜೋರು ಚರ್ಚೆ ನಡೆದಿದೆ. ಆದರೆ, ಆ ಕಡೆ ತಮಿಳುನಾಡು ಸರ್ಕಾರವು ಸದ್ದಿಲ್ಲದೆ ತಮಿಳುನಾಡಿನ ಹೊಸೂರಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪರ್ಯಾಯವಾಗಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.ಆದರೆ, ಕರ್ನಾಟಕ ಸರ್ಕಾರ ಸ್ಥಳ ನಿಗದಿ ಮಾಡವ ಪ್ರಾಥಮಿಕ ಹಂತವನ್ನೇ ಪೂರೈಸುತ್ತಿದೆ. ಇದರ ಬೆನ್ನಲ್ಲೇ ತಮಿಳುನಾಡು ಸರ್ಕಾರವು ಕೇಂದ್ರ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಹಂತಕ್ಕೆ ಮುಂದಾಗಿದೆ. ತಮಿಳುನಾಡು ಸರ್ಕಾರವು ಹೊಸೂರು ಭಾಗದಲ್ಲಿ ನೂತನ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಅವಸರ ಪಡುತ್ತಿರುವುದೇಕೆ. ತಮಿಳುನಾಡಿನ ಲೆಕ್ಕಾಚಾರಗಳೇನು ಎನ್ನುವ ವಿವರ ಇಲ್ಲಿದೆ.
ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಸಿದ್ಧತೆ ಹೆಚ್ಚಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಈ ವಿಮಾನ ನಿಲ್ದಾಣವನ್ನು ಬಳಸುವ ಪ್ರಯಾಣಿಕರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಮುಂದಿನ ಒಂದು ಅಥವಾ ಎರಡು ದಶಕದ ಅವಧಿಯಲ್ಲಿ ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಅತ್ಯಂತ ಅವಶ್ಯಕವಾಗಿದೆ ಎಂದು ಹೇಳಲಾಗಿದೆ.ಇದನ್ನೇ ಗುರಿಯಾಗಿಸಿಕೊಂಡು ಹಾಗೂ ಆರ್ಥಿಕ ಲೆಕ್ಕಾಚಾರಗಳನ್ನು ಹಾಕಿರುವ ತಮಿಳುನಾಡು ಸರ್ಕಾರ ಬೆಂಗಳೂರಿನಿಂದ ಕೆಲವೇ ಗಂಟೆಗಳಲ್ಲಿ ತಲುಪಬಹುದಾದ ತಮಿಳುನಾಡಿನ ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಕೆಲಸವನ್ನು ಚುರುಕುಗೊಳಿಸಿದೆ. ಆದರೆ, ಇದರ ಹಿಂದೆ ಬೇರೆ ಲೆಕ್ಕಾಚಾರಗಳೂ ಬೇರೆಯೇ ಇವೆ.
ಒಂದು ನಿಲ್ದಾಣ ಹಲವು ಲಾಭ: ತಮಿಳುನಾಡಿನಲ್ಲಿ ವಿಮಾನ ನಿಲ್ದಾಣದ ಹಿಂದೆ ಇರುವ ಮುಖ್ಯ ಲೆಕ್ಕಾಚಾರ ಬೆಂಗಳೂರಿನ ಉದ್ಯಮಿಗಳನ್ನು ಸೆಳೆಯುವುದು. ಹೌದು ಕರ್ನಾಟಕ ಹಾಗೂ ತಮಿಳುನಾಡಿನ ಗಡಿಭಾಗದಲ್ಲಿರುವ ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದರಿಂದ ಸುಲಭವಾಗಿ ಉದ್ಯಮಿಗಳನ್ನು ಸೆಳೆಯಬಹುದು. ಅಲ್ಲದೆ ಎರಡು ಕಡೆ ಉದ್ಯಮಗಳನ್ನು ಅಭಿವೃದ್ಧಿಪಡಿಸಬೇಕು ಎನ್ನುವ ಲೆಕ್ಕಾಚಾರದಲ್ಲಿ ಇರುವ ಉದ್ಯಮಿಗಳಿಗೆ ಇದು ಲಾಭವಾಗಲಿದೆ.ತಮಿಳುನಾಡಿನ ಹೊಸೂರು ಕೈಗಾರಿಕಾ ಪ್ರದೇಶವಾಗಿದ್ದು, ವೇಗವಾಗಿ ಬೆಳೆಯುತ್ತಿರುವ ತಮಿಳುನಾಡಿನ ಪ್ರಮುಖ ಕೈಗಾರಿಕಾ ಪ್ರದೇಶಗಳಲ್ಲಿ ಒಂದಾಗಿದೆ. ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದರಿಂದ ಕೈಗಾರಿಕೆಗೆ ಉತ್ತೇಜನ ನೀಡುವುದರ ಜೊತೆ ಜೊತೆಗೆ ಇನ್ನಷ್ಟು ಉದ್ಯಮಗಳನ್ನು ಸೆಳೆಯುವ ಲೆಕ್ಕಾಚಾರವೂ ಇದೆ.
ಇದು ತಮಿಳುನಾಡಿಗೆ ವರದಾನವಾಗಿದೆ. ಅಲ್ಲದೆ ಬೆಂಗಳೂರಿನಲ್ಲಿ ತಮಿಳುನಾಡಿನವರೂ ಸೇರಿದಂತೆ ಎಲ್ಲಾ ರಾಜ್ಯದವರೂ ಇದ್ದಾರೆ. ವ್ಯಾಪಾರ ಅಥವಾ ಅನುಕೂಲತೆ ಎಂದು ಬಂದಾಗ ಜನ ಸುಲಭವಾಗಿರುವುದನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದರಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹಿನ್ನಡೆ ಆಗದಿದ್ದರೂ, ತಮಿಳುನಾಡಿಗೆ ಲಾಭ ಆಗುವುದು ಕನ್ಫರ್ಮ್ ಅಂತಲೇ ಹೇಳಲಾಗುತ್ತಿದೆ.
ಮೆಟ್ರೋ ಪ್ರಸ್ತಾವನೆ ನಿರಾಕರಿಸಲಾಗಿತ್ತು: ಬೆಂಗಳೂರಿನ ಮೆಟ್ರೋ ಸೇವೆಯನ್ನು ಹೊಸೂರಿಗೆ ವಿಸ್ತರಿಸಬೇಕು ಎಂದು ತಮಿಳುನಾಡು ಸರ್ಕಾರ ಪ್ರಸ್ತಾವನೆ ಸಲ್ಲಿಸಿತ್ತು. ರಾಜ್ಯ ಕಾಂಗ್ರೆಸ್ ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಹೆಜ್ಜೆ ಇರಿಸುವಾಗಲೇ ಕನ್ನಡಿಗರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಬಗ್ಗೆ ಚರ್ಚೆ ಮುಂದುವರಿಸಲಿಲ್ಲ. ಈ ವಿಷಯ ತಣ್ಣಗಾಗುತ್ತಿದ್ದಂತೆಯೇ ತಮಿಳುನಾಡು ಸರ್ಕಾರವು ವಿಮಾನ ನಿಲ್ದಾಣಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ.
Author: VS NEWS DESK
pradeep blr