Sikandar movie teaser: ಸಲ್ಮಾನ್ ಖಾನ್ ನಟನೆಯ ‘ಸಿಖಂಧರ್’ ಸಿನಿಮಾದ ಟೀಸರ್ ಇಂದು (ಡಿಸೆಂಬರ್ 28) ಬಿಡುಗಡೆ ಆಗಿದೆ. ಮನಮೋಹನ್ ಸಿಂಗ್ ನಿಧನದ ಕಾರಣದಿಂದ ಟೀಸರ್ ಬಿಡುಗಡೆ ಮುಂದೂಡಲಾಗಿತ್ತು. ಈಗ ಬಿಡುಗಡೆ ಆಗಿರುವ 1:41 ನಿಮಿಷದ ಟೀಸರ್ನಲ್ಲಿ ಸಲ್ಲು ಭಾಯ್ ಮಿಂಚಿದ್ದಾರೆ. ಸಿನಿಮಾ ಮುಂದಿನ ವರ್ಷ ಈದ್ ಹಬ್ಬಕ್ಕೆ ಬಿಡುಗಡೆ ಆಗಲಿದೆ.
‘ಬಹಳಷ್ಟು ಜನ ನನ್ನ ಹಿಂದೆ ಬಿದ್ದಿದ್ದಾರೆ ಎಂದು ಕೇಳಿದ್ದೇನೆ, ಆದರೆ ನಾನು ತಿರುಗಿ ಬೀಳುವವರೆಗೆ ಮಾತ್ರ’ ಇದು ಸಲ್ಮಾನ್ ಖಾನ್ ನಟನೆಯ ‘ಸಿಖಂಧರ್’ ಸಿನಿಮಾದ ಟೀಸರ್ನ ಹೈಲೈಟ್ ಡೈಲಾಗ್. ಸಲ್ಮಾನ್ ಖಾನ್ ಜೀವ ತೆಗೆಯಲು ದೊಡ್ಡ ದೊಡ್ಡ ಮಾಫಿಯಾ ಗ್ಯಾಂಗ್ಗಳು ಹಿಂದೆ ಬಿದ್ದಿವೆ ಆ ಗ್ಯಾಂಗ್ಗಳಿಗೆ ಟಾಂಗ್ ಕೊಡುವ ರೀತಿಯಲ್ಲಿ ಟೀಸರ್ನ ಡೈಲಾಗ್ ಇದೆ. ‘ಸಿಖಂಧರ್’ ಸಿನಿಮಾದ ಟೀಸರ್ ಇಂದು ಬಿಡುಗಡೆ ಆಗಿದ್ದು, 1:41 ನಿಮಿಷದ ಟೀಸರ್ನಲ್ಲಿ ಸಲ್ಲು ಭಾಯ್ ಮಿಂಚಿದ್ದಾರೆ.
ಟೀಸರ್ನಲ್ಲಿ ಸಣ್ಣ ಆಕ್ಷನ್ ದೃಶ್ಯವೊಂದನ್ನು ತೋರಿಸಲಾಗಿದೆ. ಸಲ್ಮಾನ್ ಖಾನ್ ಎಂದಿನ ಖದರ್ನಲ್ಲಿ ಟೀಸರ್ನಲ್ಲಿ ಕಾಣಿಸಿಕೊಂಡಿದ್ದಾರೆ. ‘ಸಿಂಖಧರ್’ ಸಿನಿಮಾವನ್ನು ತಮಿಳಿನ ಖ್ಯಾತ ನಿರ್ದೇಶಕ ಎಆರ್ ಮುರುಗದಾಸ್ ನಿರ್ದೇಶನ ಮಾಡಿದ್ದು, ಸಲ್ಮಾನ್ ಖಾನ್ರ ಗೆಳೆಯ ಸಾಜಿದ್ ನಾಡಿಯಾವಾಲ ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಆದರೆ ಟೀಸರ್ನಲ್ಲಿ ಸಲ್ಮಾನ್ ಖಾನ್ ಹೊರತಾಗಿ ಇನ್ಯಾವ ನಟ ಅಥವಾ ನಟಿಯರ ದರ್ಶನವನ್ನೂ ಮಾಡಿಸಿಲ್ಲ ನಿರ್ದೇಶಕರು.
‘ಸಿಖಂಧರ್’ ಸಿನಿಮಾ ಪಕ್ಕಾ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿರಲಿದೆ ಎಂಬುದನ್ನು ಟೀಸರ್ನಲ್ಲಿಯೇ ತೋರಿಸಿದ್ದಾರೆ. ಟೀಸರ್ನಲ್ಲಿ ಹಲವು ಬಂದೂಕುಗಳು, ದುಷ್ಟರ ಕೂಟಗಳು ನೋಡ ಸಿಗುತ್ತವೆ. ಮುರುಗದಾಸ್ ಈ ಹಿಂದೆ, ‘ಗಜಿನಿ’, ‘ಏಳವಂ ಅರಿವು’, ‘ಸ್ಟಾಲಿನ್’, ‘ತುಪ್ಪಾಕಿ’, ‘ಕತ್ತಿ’,‘ಸ್ಪೈಡರ್’ ಇನ್ನೂ ಕೆಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಹಿಂದಿಯಲ್ಲಿ ಆಮಿರ್ ಖಾನ್ ಜೊತೆಗೆ ‘ಗಜಿನಿ’, ಅಕ್ಷಯ್ ಕುಮಾರ್ ಜೊತೆಗೆ ‘ಹಾಲಿಡೆ’, ಸೋನಾಕ್ಷಿ ಸಿನ್ಹಾ ನಟನೆಯ ‘ಅಕಿರ’, ಸಲ್ಮಾನ್ ಖಾನ್ ನಟನೆಯ ‘ಜೈ ಹೋ’ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ‘ಸಿಖಂಧರ್’ ಸಿನಿಮಾ ಸಲ್ಮಾನ್ ಖಾನ್ ಜೊತೆಗೆ ಮುರುಗದಾಸ್ಗೆ ಎರಡನೇ ಸಿನಿಮಾ.
ಇನ್ನು ಸಲ್ಮಾನ್ ಖಾನ್, ಸತತ ಸೋಲಿನಿಂದ ಕಂಗೆಟ್ಟಿದ್ದಾರೆ. ಸಲ್ಮಾನ್ ಖಾನ್ ನಟನೆಯ ‘ರಾಧೆ’, ‘ಅಂತಿಮ್’, ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’, ‘ಟೈಗರ್ 3’ ಸಿನಿಮಾಗಳು ಅಷ್ಟೇನು ಒಳ್ಳೆಯ ಪ್ರದರ್ಶನ ಕಂಡಿಲ್ಲ. ಹಾಗಾಗಿ ‘ಸಿಖಂಧರ್’ ಸಿನಿಮಾ ಮೇಲೆ ಅವರಿಗೆ ಹೆಚ್ಚಿನ ನಿರೀಕ್ಷೆ ಇದೆ. ಟೀಸರ್ನಲ್ಲಿಯೇ ಹೇಳಿರುವಂತೆ ಈ ಸಿನಿಮಾ 2025ರ ಈದ್ ಹಬ್ಬಕ್ಕೆ ತೆರೆಗೆ ಬರಲಿದೆ.
Author: VS NEWS DESK
pradeep blr