ಚೆನ್ನೈ : ಭಾರತದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅನಿಲ್ ಕುಂಬ್ಳೆ ನಂತರ ಅತಿಹೆಚ್ಚು ವಿಕೆಟ್ ಪಡೆದ ರವಿಚಂದ್ರನ್ ಅಶ್ವಿನ್, ಬಾರ್ಡರ್ – ಗವಾಸ್ಕರ್ ಸರಣಿಯ ಮಧ್ಯದಲ್ಲೇ ಅಂತರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿ, ತವರಿಗೆ ವಾಪಸ್ ಆಗಿದ್ದದ್ದು ಗೊತ್ತೇ ಇದೆ. ಈಗ, ಅವರು ಮಾಡಿದ ಮೆಸೇಜ್ ಒಂದು ಕ್ರಿಕೆಟ್ ಲೋಕದಲ್ಲಿ ಸದ್ದನ್ನು ಮಾಡುತ್ತಿದೆ.
ತಂಡಕ್ಕೆ ನನ್ನ ಅವಶ್ಯಕತೆ ಇಲ್ಲದಿದ್ದರೆ ನಾನು ಹೊರ ನಡೆಯುವುದು ಉತ್ತಮ ಎನ್ನುವ ಮಾತನ್ನು ಅಶ್ವಿನ್, ನಾಯಕ ರೋಹಿತ್ ಶರ್ಮಾಗೆ ಹೇಳಿದ್ದರು. ಈಗ, ಅಶ್ವಿನ್ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ, ಪತ್ನಿಗೆ ಕಳುಹಿಸಿದ ಸಂದೇಶ ಸದ್ದು ಮಾಡುತ್ತಿದೆ. ಆ ಮೆಸೇಜ್ ಅನ್ನು ಅಶ್ವಿನ್ ಕೂಡಲೇ ಡಿಲಿಟ್ ಮಾಡಿದ್ದಾರೆ.
ರವಿಚಂದ್ರನ್ ಅಶ್ವಿನ್ ಅವರು ರೋಹಿತ್ ಶರ್ಮ ಪತ್ನಿ ರಿತಿಕಾ ಸಚ್ದೇಹ್ ಅವರ ನಕಲಿ ಸಾಮಾಜಿಕ ಖಾತೆಯೊಂದಿಗೆ ಸಂವಹನ ನಡೆಸಿದ್ದಾರೆ. ತಾನು ಸಂವಹನ ನಡೆಸಿದ್ದು ನಕಲಿ ಖಾತೆ ಎನ್ನುವುದನ್ನು ಅರಿತ ಅಶ್ವಿನ್, ಕೂಡಲೇ ತಮ್ಮ ಪೋಸ್ಟ್ ಅನ್ನು ಟ್ವಿಟ್ಟರ್ (ಎಕ್ಸ್) ನಲ್ಲಿ ಡಿಲಿಟ್ ಮಾಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ದ ಸರಣಿಯನ್ನು ಭಾರತ 1-3 ಅಂತರದಲ್ಲಿ ಸೋತ ಬೆನ್ನಲ್ಲೇ, ಅಶ್ವಿನ್ ಅವರ ಎಕ್ಸ್ ಪೋಸ್ಟ್ ಒಂದಕ್ಕೆ @Nishitha018 ಖಾತೆಯಿಂದ ಪ್ರತಿಕ್ರಿಯೆ ಬಂದಿತ್ತು. ರೋಹಿತ್ ಪತ್ನಿಯ ಹೆಸರು ಅವರ ಫೋಟೋ ಇದ್ದದ್ದನ್ನು ನೋಡಿ, ಅಶ್ವಿನ್ ಆ ಪೋಸ್ಟಿಗೆ ರಿಪ್ಲೈ ಮಾಡಿದ್ದರು.
ಆಸ್ಟ್ರೇಲಿಯಾ ತಂಡ, ಬಾರ್ಡರ್ – ಗವಾಸ್ಕರ್ ಸರಣಿಯಲ್ಲಿ ಭಾರತವನ್ನು ಕ್ಲೀನ್ ಸ್ವೀಪ್ ಮೂಲಕ ಸೋಲಿಸಬಹುದು ಎಂದು ತಿಳಿದುಕೊಂಡಿತ್ತು ಎಂದು ನಕಲಿ ಖಾತೆಯಿಂದ, ಅಶ್ವಿನ್ ಪೋಸ್ಟಿಗೆ ಕಾಮೆಂಟ್ ಬಂದಿತ್ತು. ಅದಕ್ಕೆ, “Hi Ritika, how are you? Regards to the little one and family ” ಎಂದು ಅಶ್ವಿನ್ ಪ್ರತಿಕ್ರಿಯಿಸಿದ್ದರು.
ಅದಕ್ಕೆ ಐ ಆಮ್ ಗುಡ್ ಅಶ್ವಿನ್ ಅಣ್ಣ ಎಂದು ಕಾಮೆಂಟ್ ಬಂದಿದ್ದನ್ನು ನೋಡಿ, ಇದೊಂದು ಫೇಕ್ ಅಕೌಂಟ್ ಎನ್ನುವುದು ಅಶ್ವಿನ್ ಅವರಿಗೆ ಗೊತ್ತಾಗಿದೆ, ಕೂಡಲೇ ತಮ್ಮ ರಿಪ್ಲೈ ಅನ್ನು ಅಶ್ವಿನ್ ಡಿಲಿಟ್ ಮಾಡಿದ್ದಾರೆ. ನವೆಂಬರ್ ತಿಂಗಳಲ್ಲಿ ರೋಹಿತ್ ಶರ್ಮಾ ದಂಪತಿಗಳಿಗೆ ಎರಡನೇ ಮಗುವಾಗಿತ್ತು.
ಇನ್ನೊಂದು ಕಡೆ, ಬ್ರಿಸ್ಬೇನ್ ನಲ್ಲಿ ಮೂರನೇ ಟೆಸ್ಟ್ ನಂತರ, ಭಾರತದ ಬಿಗ್ಗೆಸ್ಟ್ ಮ್ಯಾಚ್ ವಿನ್ನರ್ ಎಂದೇ ಹೆಸರು ಪಡೆದಿದ್ದ ಆರ್.ಅಶ್ವಿನ್, ಅಂತರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿಯನ್ನು ಘೋಷಿಸಿದ್ದರು. ನಾಯಕ ರೋಹಿತ್ ಶರ್ಮಾ ಜೊತೆ ಪತ್ರಿಕಾಗೋಷ್ಠಿಯನ್ನು ನಡೆಸಿ, ತನ್ನ ನಿರ್ಧಾರವನ್ನು ಅಶ್ವಿನ್ ಪ್ರಕಟಿಸಿದ್ದರು.
ಆಸ್ಟ್ರೇಲಿಯಾ ಜೊತೆಗಿನ ಸರಣಿಯ ಎರಡನೇ ಟೆಸ್ಟ್ ನಲ್ಲಿ ಆಡಿದ್ದ ಆರ್. ಅಶ್ವಿನ್ ಅವರನ್ನು ಮೂರನೇ ಟೆಸ್ಟಿಗೆ ಕೈಬಿಟ್ಟು, ರವೀಂದ್ರ ಜಡೇಜಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಅಶ್ವಿನ್, ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಆಡಲಿದ್ದಾರೆ.