ಬೆಂಗಳೂರು,ಜ.೬-ಸಾಲದ ಬಾಧೆಯಿಂದ ನಲುಗಿದ್ದ ನೊಂದ ಸಾಫ್ಟ್‌ವೇರ್ ಉದ್ಯೋಗಿ ದಂಪತಿಯು ತಮ್ಮಿಬ್ಬರು ಮಕ್ಕಳಿಗೆ ವಿಷ ಉಣಿಸಿ ಕೊಂದು ತಾವಿಬ್ಬರೂ ನೇಣಿಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಸದಾಶಿವನಗರದ ಆರ್‌ಎಂವಿ ಬಡಾವಣೆಯ ಎರಡನೇ ಹಂತದಲ್ಲಿ ನಡೆದಿದೆ.
ಆರ್‌ಎಂವಿ ಬಡಾವಣೆಯ ಎರಡನೇ ಹಂತದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಉತ್ತರಪ್ರದೇಶದ ಅಲಹಾಬಾದ್ ಮೂಲದ ಅನೂಪ್ ಕುಮಾರ್ (೩೮), ಪತ್ನಿ ರಾಖಿ (೩೫) ಐದು ವರ್ಷದ ವಿಶೇಷ ಚೇತನ ಹೆಣ್ಣು ಅನುಪ್ರಿಯಾ ಹಾಗೂ ಎರಡು ವರ್ಷದ ಗಂಡು ಮಗು ಪ್ರಿಯಾಂಶ್ (೨)ಗೆ ವಿಷ ಉಣಿಸಿ ಕೊಲೆಗೈದು ತಾವಿಬ್ಬರೂ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಕನ್ಸಲ್ಟೆಂಟ್ ಆಗಿ ದಂಪತಿಯು ಮನೆಯಲ್ಲಿಯೇ(ವರ್ಕ್ ಫ್ರಂ ಹೊಂ) ಕೆಲಸ ಮಾಡುತ್ತಿದ್ದರು. ಇಂದು ಬೆಳಗ್ಗೆ ಮನೆಗೆ ಕೆಲಸವರು ಬಂದಾಗ ನಾಲ್ವರು ಸಾವನ್ನಪ್ಪಿರುವುದು ಕಂಡುಬಂದಿದೆ.
ಮನೆಕೆಲಸದವರು ಮಾಹಿತಿಯನ್ನು ನೀಡಿದ ತಕ್ಷಣವೇ ಸ್ಥಳಕ್ಕೆ ಸದಾಶಿವನಗರ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.ಸಾಲಬಾಧೆ ತಾಳಲಾರದೆ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಪ್ರಕರಣದ ಸಂಬಂಧ ಕೇಂದ್ರ ವಿಭಾಗ ಡಿಸಿಪಿ ಶೇಖರ್ ಹೆಚ್‌ಟಿ ಮಾತನಾಡಿ, ಆರ್‌ಎಂವಿ ಬಡಾವಣೆಯ ಎರಡನೇ ಹಂತದ ಬಾಡಿಗೆಗಿದ್ದ ಮನೆಯಲ್ಲಿ ಒಂದೇ ಕುಟುಂಬದ ನಾಲ್ಕು ಜನ ಮೃತರಾದ ಬಗ್ಗೆ ಮಾಹಿತಿ ಬಂತು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇವೆ ಎಂದು ತಿಳಿಸಿದರು.
ಸದ್ಯದ ಮಾಹಿತಿ ಪ್ರಕಾರ ಮೃತರು ಮೂಲತಃ ಉತ್ತರಪ್ರದೇಶದ ಅಲಹಾಬಾದ್‌ನವರು ಎಂದು ತಿಳಿದುಬಂದಿದೆ. ಕಳೆದ ಎರಡು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.ಮೃತ ಅನೂಪ್ ಕುಮಾರ್ ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದರು.ಮೃತರ ಕುಟುಂಬಸ್ಥರಿಗೆ ಮಾಹಿತಿಯನ್ನು ತಿಳಿಸಿದ್ದೇವೆ.
ಸಂಜೆ ವೇಳೆಗೆ ಮೃತರ ಕುಟುಂಬಸ್ಥರು ಬೆಂಗಳೂರಿಗೆ ಬರಲಿದ್ದಾರೆ,ಅವರಿಂದ ಮಾಹಿತಿಯನ್ನು ಪಡೆಯಲಾಗುವುದು,ಈಗಾಗಲೇ ಎಫ್‌ಎಸ್‌ಎಲ್ ಅಧಿಕಾರಿಗಳು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.ಯಾವ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವುದರ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.