ಬೆಂಗಳೂರು: ಮನೆ ಕಸಕ್ಕೂ ಕಟ್ಟಬೇಕು ತೆರಿಗೆ? ವಾರ್ಷಿಕ 600 ಕೋಟಿ ರೂ. ಸಂಗ್ರಹಕ್ಕೆ ಯೋಚನೆ

ಬೆಂಗಳೂರಿನಲ್ಲಿ ಘನತ್ಯಾಜ್ಯ ನಿರ್ವಹಣೆಗಾಗಿ ಹೊಸ ಶುಲ್ಕ ವಿಧಿಸಲು BSWML ಯೋಚಿಸಿದೆ. ಕಟ್ಟಡದ ಚದರ ಅಡಿ ಆಧಾರದ ಮೇಲೆ ತಿಂಗಳಿಗೆ 10 ರೂಪಾಯಿಂದ 400 ರೂಪಾಯಿವರೆಗೆ ಶುಲ್ಕ ವಿಧಿಸಲು ಘನತ್ಯಾಜ್ಯ ನಿರ್ವಹಣೆ ಸಂಸ್ಥೆ ಮುಂದಾಗಿದೆ. ಈ ಮೂಲಕ ವಾರ್ಷಿಕವಾಗಿ 600 ಕೋಟಿ ರೂಪಾಯಿಸ ಸಂಗ್ರಹಿಸುವ ಗುರಿ ಹೊಂದಿದೆ. ಈ ಕುರಿತುಘನತ್ಯಾಜ್ಯ ನಿರ್ವಹಣೆ ಸಂಸ್ಥೆ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಯೋಚಿಸಿದೆ.

ಬೆಂಗಳೂರು, ಮಾರ್ಚ್​ 14: ನಮ್ಮ ಮೆಟ್ರೋ (Namma Metro) ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಬೆಂಗಳೂರಿನ ಜನಸಾಮಾನ್ಯರಿಗೆ ಮತ್ತೊಂದು ಬೆಲೆ ಏರಿಕೆ ಬಿಸಿ ತಟ್ಟಲಿದೆ. ಪ್ರತಿ ಮನೆಯಿಂದ ಸಂಗ್ರಹಿಸುವ ಕಸಕ್ಕೂ ಶುಲ್ಕ ವಸೂಲಿಗೆ ಘನತ್ಯಾಜ್ಯ ನಿರ್ವಹಣೆ ಸಂಸ್ಥೆ (BSWML) ಮುಂದಾಗಿದೆ. 0 ರೂಪಾಯಿಂದ ಗರಿಷ್ಠ 400 ರೂಪಾಯಿ ವರೆಗೆ ಮಾಸಿಕ ತೆರಿಗೆ ವಿಧಿಸಿ ವಾರ್ಷಿಕ 600 ಕೋಟಿ ರೂಪಾಯಿ ಗಳಿಸುವ ಯೋಚನೆಯನ್ನು ಘನತ್ಯಾಜ್ಯ ನಿರ್ವಹಣೆ ಸಂಸ್ಥೆ ಇಟ್ಟುಕೊಂಡಿದೆ.

ಘನತ್ಯಾಜ್ಯ ನಿರ್ವಹಣೆ ಸಂಸ್ಥೆ ನಗರದ ಪ್ರತೀ ಮನೆ ಬಾಗಿಲಿಗೆ ಬಂದು ತ್ಯಾಜ್ಯ ಸಂಗ್ರಹಿಸುವುದು ಮತ್ತು ವಿಲೇವಾರ ಮಾಡುವುದರಿಂದ ಈ ಶುಲ್ಕ ವಿಧಿಸಲು ಯೋಚಿಸಿದೆ. ಈ ಕುರಿತಾಗಿ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಘನತ್ಯಾಜ್ಯ ನಿರ್ವಹಣೆ ಸಂಸ್ಥೆ ಚಿಂತನೆ ನಡೆಸಿದೆ.

ಘನತ್ಯಾಜ್ಯ ನಿರ್ವಹಣೆ ಸಂಸ್ಥೆ ಕಟ್ಟಡದ ವಿಸ್ತೀರ್ಣದ ಆಧಾರದ ಮೇಲೆ ಬಳಕೆದಾರ ಶುಲ್ಕ ವಿಧಿಸಲಿದೆ. ಇದರಲ್ಲಿ ಒಟ್ಟು ವಿಭಿನ್ನ ಶ್ರೇಣಿಗಳಿವೆ. 600 ಚದರ ಅಡಿವರೆಗಿನ ಕಟ್ಟಡಗಳು ತಿಂಗಳಿಗೆ 10 ರೂ. ವರ್ಷಕ್ಕೆ 120 ರೂ. 600 ರಿಂದ 1000 ಚದರ ಅಡಿವರೆಗಿನ ಕಟ್ಟಡಗಳು ತಿಂಗಳಿಗೆ 50 ರೂ. 1000ದಿಂದ 2000 ಚದರ ಅಡಿವರೆಗಿನ ಕಟ್ಟಡಗಳು ತಿಂಗಳಿಗೆ 100 ರೂ. 2000ದಿಂದ 3000 ಚದರ ಅಡಿವರೆಗಿನ ಕಟ್ಟಡಗಳು ತಿಂಗಳಿಗೆ 150 ರೂ., 3000 ದಿಂದ 4000 ಚದರ ಅಡಿವರೆಗಿನ ಕಟ್ಟಡಗಳು ತಿಂಗಳಿಗೆ 200 ರೂ. ಮತ್ತು 4000 ಚದರ ಅಡಿ ಮೇಲ್ಪಟ್ಟು ಕಟ್ಟಡಗಳು ತಿಂಗಳಿಗೆ 400 ರೂ. ವರ್ಷಕ್ಕೆ 4800 ಶುಲ್ಕ ಕಟ್ಟಬೇಕು.

ಇದರಿಂದ ವಾರ್ಷಿಕ ಆಸ್ತಿ ತೆರಿಗೆ ಗಣನೀಯವಾಗಿ ಹೆಚ್ಚಾಗುವ ನಿರೀಕ್ಷೆಯಿದೆ. ಘನತ್ಯಾಜ್ಯ ನಿರ್ವಹಣೆ ಕಂಪನಿಯ ಅಂದಾಜಿನ ಪ್ರಕಾರ, ಬಳಕೆದಾರ ಶುಲ್ಕದಿಂದ ವಾರ್ಷಿಕವಾಗಿ ಸುಮಾರು 600 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಆದರೆ ಇದು ಇನ್ನೂ ಹೆಚ್ಚಾಗುವ ಸಾಧ್ಯತೆಯೂ ಇದೆ.

ಬೆಂಗಳೂರಿಗೆ ಎದುರಾಯ್ತು ಕಸದ ಕಂಟಕ

ಕಣ್ಣೂರು, ಮಿಟ್ಟಗಾನಹಳ್ಳಿ ಕಸದ ಡಂಪಿಂಗ್ ಯಾರ್ಡ್ ಬಂದ್ ಆದ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಕಸದ ಲಾರಿಗಳು ನಿಂತಲ್ಲೇ ನಿಂತಿವೆ. ಗ್ರಾಮಸ್ಥರು ಸುಮಾರು 600 ಕಸದ ಲಾರಿಗಳನ್ನು ತಡೆಹಿಡಿದಿದ್ದಾರೆ. ಹೀಗಾಗಿ, ಬೆಂಗಳೂರಿನ ಹಲವೆಡೆ ಕಸದ ಲಾರಿಗಳು ನಿಂತಲ್ಲೇ ನಿಂತಿವೆ. ಬೆಂಗಳೂರಿನ ಶೇ 65 ರಷ್ಟು ಕಸ ಮಿಟ್ಟಗಾನಹಳ್ಳಿ ಬಳಿ ಕ್ವಾರಿಗಳಲ್ಲಿ ಡಂಪ್ ಆಗುತ್ತಿತ್ತು. ಆದರೆ, ಗ್ರಾಮಸ್ಥರು ಕಸ ಡಂಪ್​ ಮಾಡಲು ತಡೆದಿದ್ದರಿಂದ ಕಸದ ಲಾರಿಗಳು ನಿಂತಲ್ಲೇ ನಿಂತಿವೆ.