ಚಿಕ್ಕಬಳ್ಳಾಪುರದ ಒಎಂಬಿ ನಗರದಲ್ಲಿ ಮಾಟಮಂತ್ರದ ಭೀತಿ ಹರಡಿದೆ. ನಿಂಬೆಹಣ್ಣು, ಅರಿಶಿನ, ಕುಂಕುಮದ ಕುರುಹುಗಳು ಕಂಡುಬಂದಿವೆ. ಟೈಲರ್ ಶಾಂತಕುಮಾರ್ ಅವರ ಅಂಗಡಿಯ ಮುಂದೆ ಇದೇ ರೀತಿಯ ಘಟನೆಗಳು ನಡೆದಿದ್ದು, ಸಿಸಿಟಿವಿ ಮೂಲಕ ಮುನಿಲಕ್ಷ್ಮಮ್ಮ ಎಂಬ ಮಹಿಳೆಯನ್ನು ಪತ್ತೆಹಚ್ಚಲಾಗಿದೆ. ಇದೇ ಪ್ರದೇಶದ ಜಯಲಕ್ಷ್ಮೀ ಅವರ ಪತಿಯ ಮರಣಕ್ಕೂ ಮಾಟಮಂತ್ರವನ್ನು ಕಾರಣವೆಂದು ಆರೋಪಿಸಲಾಗಿದೆ. ನಿವಾಸಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.
ಚಿಕ್ಕಬಳ್ಳಾಪುರ, ಮಾರ್ಚ್ 19: ಚಿಕ್ಕಬಳ್ಳಾಪುರ (Chikkaballapur) ಪಟ್ಟಣದ ಒಎಂಬಿ ನಗರದಲ್ಲಿನ ಜನರು ಮಾಟಮಂತ್ರದ (Black Magic) ಭೀತಿಯಲ್ಲಿ ವಾಸಿಸುತ್ತಿದ್ದಾರೆ. ನಿತ್ಯ ಬೆಳಗಾದರೆ ಕೆಲ ಅಂಗಡಿ ಮತ್ತು ಮನೆಗಳ ಮುಂದೆ ನಿಂಬೆಹಣ್ಣು, ಅರಿಶಿನ ಮತ್ತು ಕುಂಕಮ ಇರುತ್ತಿದ್ದು ಮಾಟಮಂತ್ರದ ಕುರುಹುಗಳು ಎನ್ನಲಾಗುತ್ತಿದೆ. ಇದೇ ರಸ್ತೆಯಲ್ಲಿರುವ ಶಾಂತಕುಮಾರ್ ಎಂಬುವರ ಟೈಲರಿಂಗ್ ಅಂಗಡಿ ಮುಂದೆ ಪ್ರತಿ ದಿನವೂ ಒಂದಲ್ಲ ಒಂದು ನಿಂಬೆಹಣ್ಣಿನ ತುಂಡುಗಳು, ಹರಿಶಿನ ಕುಂಕುಮದ ಕುರುಹುಗಳು ಪತ್ತೆಯಾಗುತ್ತಿದ್ದವಂತೆ.
ಇದರಿಂದ ಆತಂಕಗೊಂಡ ಟೈಲರ್ ಶಾಂತಕುಮಾರ್ ಅವರು ಈ ರೀತಿ ಮಾಡುತ್ತಿರುವುದು ಯಾರು ಅಂತ ಪತ್ತೆ ಹಚ್ಚಲು ಅಂಗಡಿ ಮುಂದೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದರು. ಸಿಸಿಟಿವಿ ಕ್ಯಾಮೆರಾ ಅಳವಡಿಸಿದ ಎರಡೇ ದಿನಕ್ಕೆ ಎದುರುಗಡೆ ಮನೆಯ ಮಹಿಳೆ ಮುನಿಲಕ್ಷ್ಮಮ್ಮ ಅವರು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದಿದೆ. ಇದಾದ ಬಳಿಕ ಟೈಲರ್ ಶಾಂತಕುಮಾರ್ ಅವರ ಮನೆಯವರಿಗೆ ಒಂದಾಲ್ಲ ಒಂದು ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆಯಂತೆ.ಇದೇ ಏರಿಯಾದಲ್ಲಿ ವಾಸವಾಗಿರುವ ಜಯಲಕ್ಷ್ಮೀ ಎಂಬುವರದ್ದು ಮತ್ತೊಂದು ವ್ಯಥೆ. ಜಯಲಕ್ಷ್ಮೀ ಅವರು ಹೇಳುವ ಪ್ರಕಾರ, ಆರೋಗ್ಯವಾಗಿದ್ದ ಅವರ ಪತಿ ಇದ್ದಕ್ಕಿದ್ದಂತೆ ತೀರಿಕೊಂಡರಂತೆ. ವೈದ್ಯರು ಏನೂ ಸಮಸ್ಯೆ ಇಲ್ಲ ಅಂತ ವರದಿ ನೀಡಿದ, 15 ದಿನಕ್ಕೆ ನನ್ನ ಪತಿ ತೀರಿಕೊಂಡರು. ಇದಕ್ಕೆಲ್ಲಾ ಮಾಟಮಂತ್ರವೇ ಕಾರಣ ಅಂತ ಆರೋಪಿಸಿದ್ದಾರೆ. ಹೀಗಾಗಿ, ಮುನಿಲಕ್ಷ್ಮಮ್ಮ ಅವರ ವಿರುದ್ಧ ಒಎಂಬಿ ನಗರ ನಿವಾಸಿಗಳು ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಮಹಿಳೆಯ ಕಾಟ ತಪ್ಪಿಸುವಂತೆ ಮನವಿ ಮಾಡಿದ್ದಾರೆ.