ಉತ್ತರ ಕನ್ನಡದಲ್ಲಿ 40 ವರ್ಷಗಳ ಹಿಂದೆ ಎಂಡೋಸಲ್ಫಾನ್ ಸಿಂಪಡಣೆಯಿಂದಾಗಿ ಹುಟ್ಟಿದ ಅಂಗವಿಕಲ ಮಕ್ಕಳ ಸಮಸ್ಯೆ ಇನ್ನೂ ಮುಂದುವರಿದಿದೆ. ಇತ್ತೀಚಿನ ಸರ್ವೆಯಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿವೆ. ಎರಡನೇ ಪೀಳಿಗೆಯಲ್ಲಿಯೂ ಈ ಸಮಸ್ಯೆ ಮುಂದುವರೆಯುವ ಆತಂಕವಿದೆ. ಬಲಿಪಶುಗಳಿಗೆ ಸೂಕ್ತ ಪರಿಹಾರ ಮತ್ತು ಭವಿಷ್ಯದಲ್ಲಿ ಇಂತಹ ದುರಂತಗಳನ್ನು ತಪ್ಪಿಸಲು ಕ್ರಮ ಕೈಗೊಳ್ಳುವ ಅಗತ್ಯವಾಗಿದೆ.
ಕಾರವಾರ, ಮಾರ್ಚ್ 19: ಕಳೆದ ನಾಲವತ್ತು ವರ್ಷಗಳ ಹಿಂದೆ ಗೇರುಬಿಜ ಇಳುವರಿಗಾಗಿ, ಎಂಡೋಸಲ್ಪಾನ (Endosulfan) ರಾಸಾಯನಿಕ ಸಿಂಪಡಣೆ ಮಾಡಲಾಗಿತ್ತು. ಆದರೆ ಅದರ ಇಫೆಕ್ಟ್ ಇವತ್ತಿಗೂ ಮುಗಿದಿಲ್ಲ. ಗೇರು ತೋಟದ ಸುತ್ತಲಿನ ಪ್ರದೇಶಗಳಲ್ಲಿ ಜನ್ಮ ತಾಳುವ ಮಕ್ಕಳು ಇವತ್ತಿಗೂ ಅಂಗವಿಕಲರಾಗಿ (disabled) ಹುಟ್ಟುತ್ತಿವೆ. ಹಿರೋಶಿಮಾ ನಾಗಸಕಿಯಲ್ಲಿ ಬಾಂಬ್ ಸ್ಫೋಟ್ ಆಗಿದ್ದರ ಪರಿಣಾಮ ಇವತ್ತಿಗೂ ಆ ಭೂಮಿಯಲ್ಲಿ ಹುಟ್ಟುವ ಮಕ್ಕಳು ಅಂಗವಿಕಲರಾಗಿ ಹುಟ್ಟುತ್ತವೆ ಎಂಬ ಮಾತಿದೆ. ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ 40 ವರ್ಷಗಳ ಹಿಂದೆ ಸಿಂಪಡಿಸಿದ ರಾಸಾಯನಿಕದ ಇಫೆಕ್ಟ್ ಇವತ್ತಿಗೂ ಕಾಡುತ್ತಿದ್ದು, ಕಳೆದ 40 ವರ್ಷಗಳಿಂದ ಆ ಪ್ರದೇಶದಲ್ಲಿ ಜನ್ಮ ತಾಳುವ ಮಕ್ಕಳು ಅಂಗವಿಕಲರಾಗಿ ಹುಟ್ಟುತ್ತಿವೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ನಾಲವತ್ತು ವರ್ಷಗಳ ಹಿಂದೆ ಗೇರುಬೀಜದ ಇಳುವರಿ ಹಾಗೂ ರೋಗ ಭಾದೆ ತಡೆಯಲು ಎಂಡೋಸಲ್ಫಾನ್ ರಾಸಾಯನಿಕ ಸಿಂಪಡಣೆ ಮಾಡಲಾಗಿತ್ತು. ಅದರ ಪರಿಣಾಮ ಆ ಪ್ರದೇಶದಲ್ಲಿ ಜನ್ಮ ತಾಳುವ ಕಂದಮ್ಮಗಳ ಮೇಲೆ ಪರಿಣಾಮ ಬೀರುತ್ತಿದ್ದು, ಒಂದೊಂದು ಕುಟುಂಬದ ಪರಿಸ್ಥಿತಿ ನೋಡಿದರೆ ಕಣ್ಣಿರು ಬರುತ್ತೆ. ಆದರೂ ಸಹಿತ ಇವತ್ತಿಗೂ ಇದರ ಎಫೆಕ್ಟ್ ತಡೆಯಲು ಸಾಧ್ಯ ಆಗದೆ ಇರುವುದು ದೊಡ್ಡ ಆತಂಕ ಸೃಷ್ಟಿಸಿದೆ.
ಇನ್ನೂ ಎಂಡೋಸಲ್ಫಾನ ರಾಸಾಯನಿಕ ಸಿಂಪಡಣೆ ಪರಿಣಾಮವಾಗಿ ದಕ್ಷಿಣ ಕನ್ನಡದಲ್ಲಿ 3,607 ಜನರು, ಉಡುಪಿಯಲ್ಲಿ 1,514 ಜನರು, ಉತ್ತರಕನ್ನಡ ಜಿಲ್ಲೆಯಲ್ಲಿ 1,793 ಜನರು ಸೇರಿ ಒಟ್ಟು 6,914 ಜನರು ಬಹುವಿಧದ ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ ಎಂದು ದಾಖಲೆಗಳು ಹೇಳುತ್ತವೆ. ಆದರೆ ಗೇರು ನೆಡುತೋಪಿನ 5 ಕಿ.ಮೀ. ಸುತ್ತಳತೆಯಲ್ಲಿ ನಡೆಸಲಾದ ಸಮೀಕ್ಷೆಯೇ ಸರಿಯಾಗಿ ಆಗದ ಕಾರಣ ಇನ್ನೂ ಸಾವಿರಾರು ಜನ ಎಂಡೋ ಬಾಧಿತರ ಪಟ್ಟಿಯಲ್ಲಿ ಸೇರಿಲ್ಲ ಎನ್ನುವ ಆರೋಪವಿತ್ತು. ಇದೀಗ ಎರಡನೇ ಹಂತದ ಸರ್ವೆಯಲ್ಲಿ 631 ಪ್ರಕರಣ ಪತ್ತೆಯಾಗಿರುವ ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ.
ಉತ್ತರ ಕನ್ನಡ ಡಿಎಚ್ಒ ಡಾ.ನೀರಜ್ ಹೇಳಿದ್ದಿಷ್ಟು
ಈ ವಿಚಾರವಾಗಿ ಮಾತನಾಡಿದ ಉತ್ತರ ಕನ್ನಡ ಡಿಎಚ್ಒ ಡಾ.ನೀರಜ್, 2015-16ರಲ್ಲಿ ಸರ್ವೆ ಮಾಡಲಾಗಿತ್ತು. ಅದಾದ ನಂತರ 2024ರಲ್ಲಿ ಬಿಟ್ಟು ಹೋದ ಪ್ರಕರಣ ಸರ್ವೆ ಮಾಡಲಾಗಿತ್ತು. ಭಟ್ಕಳ, ಶಿರಸಿ-ಸಿದ್ದಾಪುರ, ಶಿರಾಲಿ, ಕುಮಟಾ, ಹೊನ್ನಾವರ, ಅಂಕೋಲಾದಲ್ಲಿ ಸರ್ವೆ ಮಾಡಲಾಗಿದ್ದು 1 ವರ್ಷದಲ್ಲಿ ಮಾಡಿದ ಸರ್ವೆಯಲ್ಲಿ 631 ಹೊಸ ಪ್ರಕರಣ ಪತ್ತೆಯಾಗಿದೆ. ತಜ್ಞ ವೈದ್ಯರಿಂದ ಸಹ ಪರೀಕ್ಷೆ ಮಾಡಿಸಲಾಗಿದೆ ಎಂದಿರುವ ಡಿಹೆಚ್ಓ ಈಗಾಗಲೇ ಹೊಸದಾಗಿ ಪತ್ತೆಯಾಗಿರುವ ಪ್ರಕರಣದವರ ಮಾಹಿತಿ ಪಡೆದು ಇಲಾಖೆ ವತಿಯಿಂದ ಅಂಗವಿಕಲ ಪ್ರಮಾಣ ಪತ್ರ ನೀಡಲಾಗುತ್ತಿದೆ ಎಂದರು.
1985ರಿಂದ 2010-11ರವರೆಗೆ ಎಂಡೋಸಲ್ಫಾನ್ ಸ್ಪ್ರೇಯಿಂದ ಆದ ಪರಿಣಾಮ ಮೊದಲ ಸರ್ವೆಯಲ್ಲಿ ಯಾರ ಯಾರ ಮೇಲೆ ಆಗಿದೆ ಎಂದು ಪತ್ತೆಯಾಗಿತ್ತು. ಈಗ ಎರಡನೇ ಹಂತದ ಸರ್ವೆ ಮಾಡುವ ಮೂಲಕ ಬಿಟ್ಟು ಹೋದವರ ಪತ್ತೆ ಕಾರ್ಯ ಮಾಡಲಾಗುತ್ತಿದೆ. ಎರಡನೇ ಪೀಳಿಗೆ ಎಂಡೋಸಲ್ಫಾನ್ ಬಂದಿರುವ ಸಾಧ್ಯತೆ ಇದ್ದು ಈ ಬಗ್ಗೆ ಸಂಶೊಧನೆ ನಡೆಸಬೇಕಾಗಿದೆ. 10 ವರ್ಷದ ಒಳಗಿನ ಮಕ್ಕಳ ಪತ್ತೆ ಈ ಪ್ರಕರಣದಲ್ಲಿ ಆಗಿಲ್ಲ ಎಂದು ಡಾ. ನೀರಜ್ ತಿಳಿಸಿದ್ದಾರೆ.
ಸುಮಾರು 40 ವರ್ಷದ ಹಿಂದಿನ ಘಟನೆಯಿಂದ ಸಾವಿರಾರು ಜನರು ಅಂಗವೈಕಲ್ಯಕೊಳಗಾಗಿ ಜೀವನವನ್ನೇ ಹಾಸಿಗೆಯಲ್ಲಿ ಕಳೆಯುವಂತಾಗಿತ್ತು. ಸದ್ಯ ಎಂಡೋಸಲ್ಫಾನ್ ಪ್ರಕರಣ ಮತ್ತೆ ಪತ್ತೆಯಾಗಿದ್ದು, ಒಂದೊಮ್ಮೆ ಎರಡನೇ ಪೀಳಿಗೆಗೆ ಮುಂದುವರೆದರೆ ಸಾಕಷ್ಟು ಜನರಿಗೆ ಸಮಸ್ಯೆ ಆಗಲಿದ್ದು, ಆರೋಗ್ಯ ಇಲಾಖೆ ಈ ಬಗ್ಗೆ ಮುಂಜಾಗೃತೆ ವಹಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.