ಬೀದಿಬದಿ ಅಂಗಡಿಗಳ ತೆರವು: ನಗರ ಸಭೆಯ ಕಟ್ಟುನಿಟ್ಟು ಕಾರ್ಯಾಚರಣೆ

ಭದ್ರಾವತಿ, 8 ಏಪ್ರಿಲ್ 2025: ಭದ್ರಾವತಿಯ ತರೀಕೆರೆ ರಸ್ತೆಯ ಗಾಂಧಿ ವೃತ್ತದಲ್ಲಿ ಇಂದು ಬೆಳಗ್ಗೆ 7 ಗಂಟೆಗೆ ನಗರ ಸಭೆಯ ಸಿಬ್ಬಂದಿಗಳು ಬೀದಿಬದಿ ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು. ಬೀದಿಬದಿ ವ್ಯಾಪಾರಿಗಳನ್ನು ಹೊಸದಾಗಿ ನಿರ್ಮಿಸಲಾದ  ಫುಡ್ ಕೋರ್ಟಿಗೆ ಸ್ಥಳಾಂತರಿಸುವುದು ಈ ಕಾರ್ಯಾಚರಣೆಯ ಉದ್ದೇಶವಾಗಿತ್ತು.

 

ನಗರ ಸಭೆಯು ಈ ಹಿಂದೆ ಒಂದು ತಿಂಗಳ ಮುಂಚೆಯೇ ಬೀದಿಬದಿ ವ್ಯಾಪಾರಿಗಳಿಗೆ ಹೊಸ ಫುಡ್ ಕೋರ್ಟಿಗೆ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಿತ್ತು. ಹೊಸ ಫುಟ್ ಕೋರ್ಟನ್ನು ತರಿಕೆರೆ ರಸ್ತೆಯಲ್ಲಿಯೇ ಇರುವ ಮೇಲ್ ಸೇತುವೆಯ ಕೆಳಗಡೆ ನಿರ್ಮಾಣ ಮಾಡಲಾಗಿದೆ. ಆದರೆ, ಅನೇಕ ವ್ಯಾಪಾರಿಗಳು ಈ ಸೂಚನೆಯನ್ನು ಗಮನಕ್ಕೆ ತೆಗೆದುಕೊಳ್ಳದ ಕಾರಣ, ಇಂದು ನಗರ ಸಭೆಯು ಕಟ್ಟುನಿಟ್ಟಾದ ಕಾರ್ಯಾಚರಣೆ ನಡೆಸಿತು.

ಸಿಬ್ಬಂದಿಗಳು ಮತ್ತು ಅಧಿಕಾರಿಗಳ ಸಕ್ರಿಯ ಭಾಗವಹಿಸುವಿಕೆ

ಪರಿಸರ ಅಭಿಯಂತರರು ಪ್ರಭಾಕರ್ ಎಚ್ ಅವರ ನೇತೃತ್ವದಲ್ಲಿ ಈ ತೆರವು ಕಾರ್ಯಾಚರಣೆ ನಡೆಯಿತು. ಇದರಲ್ಲಿ ಕಂದಾಯ ಅಧಿಕಾರಿಗಳು ರಮೇಶ್, ಬಿಲ್ ಕಲೆಕ್ಟರ್ ಚೇತನ್ ಕುಮಾರ್, ರವಿಪ್ರಸಾದ್, ಜಯಂತಿ, ನಾಗರಾಜ್, ಹರೀಶ್, ಮಂಜುನಾಥ್, ಅರ್ಜುನ್ ಮೊರೆ ಹಾಗೂ ಆರೋಗ್ಯ ವಿಭಾಗದ ನಿರೀಕ್ಷಕರಾದ ಆಶಾಲತಾ ಟಿ.ಆರ್, ರಮೇಶ್ ಸಿ., ಇಸ್ಮಾಯಿಲ್, ನಿತೀಶ್ ಮತ್ತು ಮೇಸ್ತ್ರಿಗಳು ಭಾಗವಹಿಸಿದ್ದರು. ಹಾಗೆಯೇ ಪೌರಕಾರ್ಮಿಕ ಸಿಬ್ಬಂದಿ ಮತ್ತು ಓಲ್ಡ್ ಟೌನ್ ಪೊಲೀಸ್ ಸಿಬ್ಬಂದಿಯವರ ಸಹಯೋಗದಿಂದ ಈ ಕಾರ್ಯಾಚರಣೆ ಸುಗಮವಾಗಿ ನಡೆಯಿತು.

ಸಾರ್ವಜನಿಕರಿಗೆ ಮನವಿ

ಪರಿಸರ ಅಭಿಯಂತರು  ಪ್ರಭಾಕರ್ ಎಚ್ ಅವರು ಹೊಸದಾಗಿ ನಿರ್ಮಿಸಲಾದ ಫುಡ್ ಕೋರ್ಟ್ನ ಸದುಪಯೋಗವನ್ನು ಪಡೆದುಕೊಳ್ಳುವಂತೆ ಮತ್ತು ನಗರಸಭೆಯ ನಿರ್ಧಾರಗಳಿಗೆ ಸಹಕರಿಸುವಂತೆ ಸಾರ್ವಜನಿಕರು ಮತ್ತು ವ್ಯಾಪಾರಿಗಳಿಗೆ ಮನವಿ ಮಾಡಿಕೊಂಡರು.

“ನಗರವನ್ನು ಸುಂದರವಾಗಿ ಮತ್ತು ವ್ಯವಸ್ಥಿತವಾಗಿ ಇಡಲು ನಮ್ಮೆಲ್ಲರ ಸಹಕಾರ ಅಗತ್ಯ,” ಎಂದು ಅವರು ಹೇಳಿದರು.

ತೆರವುಗೊಂಡ ಸ್ಥಳಗಳನ್ನು ಸ್ವಚ್ಛಗೊಳಿಸಲಾಗುತ್ತಿದ್ದು, ನಗರಸಭೆಯು ಹೊಸ ಫುಡ್ ಕೋರ್ಟ್ನಲ್ಲಿ ವ್ಯಾಪಾರಿಗಳಿಗೆ ಸರಿಯಾದ ವ್ಯವಸ್ಥೆ ಮಾಡಲು ಮುಂದಾದೆ. ಸಾರ್ವಜನಿಕರೂ ಈ ನಿಯಮಗಳನ್ನು ಪಾಲಿಸಿ ಸಹಕರಿಸಬೇಕು ಎಂದು ಅಧಿಕಾರಿಗಳು ವಿನಂತಿಸಿದ್ದಾರೆ.

ಈ ಕಾರ್ಯಾಚರಣೆಯಿಂದ ಗಾಂಧಿ ವೃತ್ತದ ಸುತ್ತಮುತ್ತ ಸಾಗಣೆ ಸುಗಮವಾಗುವುದು ಮತ್ತು ನಾಗರಿಕರಿಗೆ ಸುರಕ್ಷಿತವಾದ ವಾತಾವರಣ ಒದಗುವುದು ಎಂದು ನಗರಸಭೆ ನಿರೀಕ್ಷಿಸಿದೆ.

.

ಬಿಸಿ ಬಿಸಿ ಸುದ್ದಿ

ಕ್ರಿಕೆಟ್ ಲೈವ್ ಸ್ಕೋರ್

ಚಿನ್ನ ಮತ್ತು ಬೆಳ್ಳಿ ಬೆಲೆಗಳು